October 29, 2011

ಮುಸ್ಸಂಜೆ

ದ್ಭುತವಾದ ಸಂಜೆಗಳವು. ಎಂಥ ನಿರೀಕ್ಷೆ ಇರುತ್ತಿತ್ತು! ಬಹುಷಃ ೨೦೦೨-೨೦೧೦, ಬದುಕಿನ ಸಖತ್ ಪಾಠಗಳನ್ನ ಅದು ನನಗೆ ಕಲಿಸಿಕೊಟ್ಟಿದ್ದು ಆವಾಗಲೇ. ಈವತ್ತು ಊರಿಗೆ ಹೋದರೆ ಸಂಜೆಗಳ ಆ ನೀರಿಕ್ಷೆ ಮುಗಿದು ಹೋಗಿದೆ. ಐದೂವರೆ  ಆಗುತ್ತಿದ್ದಂತೆ ಸೆಳೆಯುತ್ತಿದ್ದ ಆ ವಾಲಿಬಾಲ್ ಈವತ್ತು ಗಾಳಿಯಿಲ್ಲದೆ ತೊಪ್ಪೆಯಾಗಿ ಅದೆಲ್ಲಿ ಕಳೆದುಹೊಗಿದೆಯೋ? ಯಾಕೋ ಊರೆಲ್ಲ ಖಾಲಿ ಖಾಲಿ. ಮನೆಯ ಮೆತ್ತಿಯಮೇಲೆ ಕೂತು ನೆತ್ತಿ ಬಿಸಿ ಆಗುವಷ್ಟು ತಲೆಕೆಡಿಸಿಕೊಂಡು ಏನೇನೋ ಕನಸುಗಳನ್ನ ಕಣ್ಮುಂದೆ ಹರಡಿಕೊಂಡು ಕೂತಿದ್ದುಂಟು, ಆ ಕಾಲದಲ್ಲಿ. ಅವುಗಳಲ್ಲಿ  ಅರ್ಧ ಕನಸುಗಳು ಸುಟ್ಟು ಕರಕಲಾಗಿ ಹೋಗಿವೆ. ಬದುಕುಳಿದವುಗಳಲ್ಲಿ ಕೆಲವು "coming  soon !".

  ಕಣ್ಣರಳಿಸುವಷ್ಟುಬದಲಾವಣೆಗಳೇನೂ ಆಗದಿದ್ದರೂ ಇಲ್ಲಿ ಏನೋ ಒಂದು ಚೇಂಜ್ ಅಂತ ಆಗದೆ. ಎಲ್ಲ ಮನೆಯಲ್ಲೂ, ಮನಸ್ಸಿನಲ್ಲೂ ..


October 2, 2011

At the door of death!

ಭಗತ್ ಸಿಂಗ್ ಬಗ್ಗೆ ನನಗೆ ಮೊದಲಿನಿಂದಲೂ ಒಂಥರದ ಆಸಕ್ತಿ, ಅದೇನೋ ಒಂಥರದ ಸೆಳೆತ.ಕೆಲವು ವರುಷಗಳ ಹಿಂದೆ, ಆತನ ಬಗ್ಗೆ ಯಾರಾದರೂ ಕನ್ನಡದಲ್ಲಿ ಬರೆದಿರಬಹುದಾದ ಕೃತಿಗಳಿಗಾಗಿ ತುಂಬಾ ಅಲೆದದಿದ್ದೆ. ಸಿಕ್ಕ ಯಾವವೂ ಅಷ್ಟೊಂದು ಇಷ್ಟವಾಗಿರಲಿಲ್ಲ.ಕಥೆಗಳನ್ನ ಅಲ್ಲಿ ಇಲ್ಲಿ ಕೇಳಿದ್ದಷ್ಟೇ ಹೊರತು ಆತನನ್ನ ಓದುವ ಅದೃಷ್ಟ ಸಿಗಲೇ ಇಲ್ಲ.
ಮೊನ್ನೆ ಯಾಕೋ ಮನಸಿಗೆ ಬೇಜಾರಾಗಿ 9th ಬ್ಲಾಕಿನ ನನ್ನ ಖಾಯಂ ಅಡ್ಡಾ  ಆದ ಬಾಲಜ್ಜನ ಅಂಗಡಿಗೆ ಹೋದವನಿಗೆ ಯಾಕೋ ಕಾಲುಗಳು ಸಪ್ನಾ ಬುಕ್ ಹೌಸ್ ನ ಕಡೆ ಎಳೆಯತೊಡಗಿದವು. ಅದು ನನ್ನ ಆಲ್ ಟೈಮ್ ಫೆವರಿಟ್ ಶಾಪಿಂಗ್ ಮಾಲ್!

ಅದ್ಭುತವಾಗಿಲ್ಲದಿದ್ದರೂ ಭಗತ್ ನ ಬಗ್ಗೆ ಸಾಕಷ್ಟು ಮಾಹಿತಿ ಇರುವ ಪುಸ್ತಕವೊಂದು ತಗುಲಿಹಾಕಿಕೊಂಡಿದೆ. ಕುಲದೀಪ್ ನಯ್ಯರ್ ಬರೆದಿದ್ದು, ಕನ್ನಡಕ್ಕೆ ಜಿ.ಪಿ.ಬಸವರಾಜು ಅಚ್ಚುಕಟ್ಟಾಗಿ ಅನುವಾದಿಸಿದ್ದಾರೆ.ಯಾಕೋ ಈ ಹೃದಯವಂತ ಕ್ರಾಂತಿಕಾರಿಯ ಬಗ್ಗೆ ಇದ್ದ ಗೌರವ-ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ಆತನ ವ್ಯಕ್ತಿತ್ವ ನನ್ನ ಕಲ್ಪನೆಯಲ್ಲಿದ್ದಕ್ಕಿಂತ ಸ್ವಲ್ಪ ಭಿನ್ನವಾದದ್ದು.ಬರೀ ಇಪ್ಪತ್ಮೂರು ವರ್ಷ ಬದುಕಿದ್ದ ಆತನನ್ನ ಓದುತ್ತ ಹೋದಂತೆಲ್ಲ ಯಾಕೋ ಈ ಭ್ರಷ್ಟ ವ್ಯವಸ್ತೆಯ ಬಗ್ಗೆ ಇನ್ನಷ್ಟು ಅಸಹ್ಯ ಹುಟ್ಟುತ್ತಿದೆ.All good things must come to an end. ಆದರೆ ಅವೆಲ್ಲ ಸಮಯಕ್ಕೆ ಮುನ್ನವೇ ಮುಗಿದುಹೋದರೆ? ಶಂಕರ್ ನಾಗ್ ಕೂಡ ಹಾಗೇ ಅಲ್ಲವೇ.

ನಾನು ಇವತ್ತಿಗೂ ಇಷ್ಟಪಡುವ, ಆದರ್ಶವಾಗಿಟ್ಟುಕೊಂಡಿರುವ  ವ್ಯಕ್ತಿಗಳಿವರು.ಸಿಕ್ಕಾಪಟ್ಟೆ ಸಿಂಪಲ್, ಅದ್ಭುತವೆನಿಸುವ ಕ್ರಿಯಾಶೀಲತೆ, ತುಂಬ ಬ್ರಿಲ್ಲಿಯಂಟ್ minds . ನಮ್ಮ ಬಾಲ್ಯದ ದಿನಗಳಲ್ಲಿ ನಮಗೆ ಇಂಥವರ ಬಗ್ಗೆ ಡಿಟೇಲ್ ಸಿಗಲೇ ಇಲ್ಲ. ಯಾವ ತರಗತಿಗೆ ಹೋದರೂ ಒಬ್ಬ "ಸಂವಿಧಾನ ಶಿಲ್ಪಿ" ಬಂದು ಕೂತುಬಿಡುತ್ತಿದ್ದ. ನೆಹರೂನನ್ನ ಒಬ್ಬ ಹೀರೋನನ್ನಾಗಿಯೇ ನಮಗೆ ತೋರಿಸಲಾಯಿತು. ಅಸಲಿಯತ್ತು ಆ ವಯಸ್ಸಿನಲ್ಲಿ ಗೊತ್ತಾಗಲೇ ಇಲ್ಲ!        
ನಿಮಗೆ ಗೊತ್ತಿರಲಿ, ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಬರೆದಿದ್ದ ಕೃತಿಗಳು ನಮಗೆ ಈವತ್ತಿಗೂ ದೊರಕುತ್ತಿಲ್ಲ. 'The history of revolutionary movement in India', 'The idea of Socialism', 'Autobiography' ಮತ್ತು, 'At the door of death'
 

June 27, 2011

ರಿಂ ಝಿಂ ಗಿರೆ ಸಾವನ್...

ನಾನು ಹೀಗೆ ಬರೆಯುವುದನ್ನೆಲ್ಲ ಅದ್ಯಾರು ಖುಷಿಯಿಂದ ಇಷ್ಟಪಟ್ಟು ಓದುತ್ತಾರೋ ಗೊತ್ತಿಲ್ಲ.ನಂಗೊತ್ತು, ಈಗಿನ ಜಮಾನದಲ್ಲಿ ಯಾರ ಬಳಿಯಲ್ಲೂ ಅಷ್ಟೊಂದು-ಇಷ್ಟೊಂದು ಟೈಮ್ ಇಲ್ಲ! ಎಲ್ಲರೂ ಸಮಯದ ಜೊತೆ ಹಠಕ್ಕೆ ಬಿದ್ದವರಂತೆ ಓಡುತ್ತಿದ್ದೀವಿ.ಅದೆಲ್ಲಿಗೆ ಬಂದು ನಿಲ್ಲುತೀವೋ ಗೊತ್ತಿಲ್ಲ.
ಈಗೊಂದೆರಡು ತಿಂಗಳಾಯಿತು, ಯಾಕೋ ಬರೆಯಲು ಕುಂತಾಗಲೆಲ್ಲ ಬರೀ ಮಳೆಯದ್ದೇ ಕಾರುಬಾರು.ಪೆನ್ನು ಬೇರೆ ಪದಗಳನ್ನ ಹುಡುಕುವ ಕೆಲಸ ಬಿಟ್ಟು ಮಳೆಯನ್ನ ಅದ್ಭುತವಾಗಿ ಆನಂದಿಸತೊಡಗಿದೆ. ಮಳೆಯ ಜೊತೆ ಸಿಕ್ಕಾಪಟ್ಟೆ ನೆನಪುಗಳನ್ನ ತಬ್ಬಿಕೊಂಡಿರುವ ನನಗೆ ಪ್ರತೀ ಮಳೆ ಹನಿಯನ್ನೂ ಖುದ್ದಾಗಿ ಭೇಟಿಯಾಗುವ ತವಕ. 
ಒಂದೆರಡು ದಿನ ಮಳೆನಾಡನ್ನ ಮಾತಾಡಿಸಿ ಬರೋಣ, ಜೋತೆಯಾಗುತ್ತೀರಾ?  
      

June 14, 2011

ಒಂದಷ್ಟು...

ಮುಸ್ಸಂಜೆ.ಏನನ್ನೋ ಹೇಳಬೇಕು, ನಿಮ್ಮ ಜೊತೆ ಸ್ವಲ್ಪ ಹೊತ್ತು ಮಾತಾಡಬೇಕು ಅನಿಸುತ್ತಿದೆ. ಮನೆಯಲ್ಲಿ ಮಾತು ಯಾಕೋ ಮೌನವಾಗಿ ಕುಂತಿದೆ. ಹಾಳಾದ ದುನಿಯಾ ತುಂಬ  ನಿಷ್ಟುರವಾಗಿಬಿಟ್ಟಿದೆ. 
ಒಂದು ಅದ್ಭುತವಾದ ಮಲೆನಾಡಿನ ಊಟ, ಕಣ್ಣಲ್ಲಿ ನೀರು ಜಿನುಗುವಷ್ಟು ನಗು, ಗೆಳೆಯರ ಜೊತೆ ಒಂದಷ್ಟು ಹರಟೆ, ತುಂಬ ಇಷ್ಟವಾದವರ ಜೊತೆ ಹಾಗೆ ಒಂದು ತಣ್ಣನೆಯ ವಾಕ್, ಬಿಕೋ ಅನ್ನುತ್ತಿರುವ ನಮ್ಮೂರಿನ ವಾಲಿಬಾಲ್ ಕೋರ್ಟಿನಲ್ಲಿ ಅದೇ ಹಳೆಯ ಗೆಳೆಯರ ಜೊತೆ- ನಮ್ಮೂರಿನ ಆ ಹಳೆಯ ಹುಲಿಗಳ ಜೊತೆ ಸೇರಿ ಒಂದು ವಾಲಿಬಾಲ್ ಮ್ಯಾಚ್, ಇವೆಲ್ಲವನ್ನೂ ತುಂಬ-ಅಂದರೆ ತುಂಬಾ ಕಳೆದುಕೊಳ್ಳುತ್ತಿದ್ದೀನೇನೋ....
ಒಂದಷ್ಟು ದಿನ ಮಲೆನಾಡ ಮಳೆಯಲ್ಲಿ ತೋಯ್ದು ಬರಬೇಕು ಅನಿಸುತ್ತಿದೆ.ಬದುಕಿಗೆ ಒಂದಷ್ಟು ಚೈತನ್ಯ ಸಿಕ್ಕರೂ ಸಿಕ್ಕೀತು.

April 17, 2011

ಸಮ್ಮರ್ ರೇನ್ !

ನಾನು ಕುಳಿತಿದ್ದ ಕೆಂಪು ಬಸ್ಸಿನ ವೈಪರ್ ಗಳು ಗಾಜಿನ ಮೇಲೆ ಮತ್ತೆ ಮತ್ತೆ ಬಂದು ಅಂಟಿಕೊಳ್ಳುತ್ತಿದ್ದ  ಮಳೆಯ ಹನಿಗಳನ್ನು ಒರೆಸುವ ವ್ಯರ್ಥ ಪ್ರಯತ್ನವನ್ನ ತಮ್ಮಪಾಡಿಗವು ಮುಂದುವರೆಸುತ್ತಿದ್ದವು. ಹೊರಗಡೆ ಮಬ್ಬು-ಕತ್ತಲೆಯ ವಾತಾವರಣ, ಮನಸೊಳಗೆಲ್ಲ ಒಂಥರದ ಬೆಳಕು! 

ಮಳೆ ಬಂದಾಗಲೇ ಏನಾದರೂ ಗೀಚಬೇಕು ಅನಿಸುವುದು, ಮನಸು ಬಿಚ್ಚಿಕೊಳ್ಳೋದು ! ಮಳೆಗಿರುವ ತಾಕತ್ತೇ ಅಂಥದು. ಒಮ್ಮೊಮ್ಮೆ ತುಂಬಾ ಬೇಜಾರಾದಾಗ ಮಳೆಯಾದರೂ ಬರಬಾರದೇ ಅನಿಸಿಬಿಡುವುದುಂಟು. ಅದೂ ಸಂಜೆಯ ಮಳೆ, ಆಹಾ! ಮಳೆ ಬಂದಾಗಲೆಲ್ಲ ನೆನಪಾಗುವುದು ನಮ್ಮೂರೇ, ಮಲೆನಾಡು! 
ಎಪ್ರಿಲ್-ಮೇ ತಿಂಗಳ ಬಿಸಿಲ ಬೇಸಿಗೆಗೆ ಮೈ ಒಡ್ಡಿ ಒದ್ದಾಡುವ ಭೂಮಿಗೆ ಮಳೆಯ ತವಕ. ಮಳೆಯ ಸ್ಪರ್ಶವಾಗುತ್ತಿದ್ದಂತೆ ಅನುಭವವಾಗುವ ಭೂಮಿತಾಯ ಕಂಪು, ಸಖ್ಖತ್ ತಂಪು!
ನೀವು ಏನೇ ಅನ್ನಿ, ಮುಂಗಾರಿಗಿಂತ ಮೊದಲು ಬರುವ ಈ ಬೇಸಿಗೆಯ ಅತಿಥಿಗಳೇ ತುಂಬಾ ಮಜಾ ಕೊಡುತ್ತವೆ. ಗುಡುಗು-ಸಿಡಿಲುಗಳ ಹಿಮ್ಮೇಳ ಮುಂಗಾರಿಗೆ ಕಡಿಮೆ. ಮುಂಗಾರಿಗೆ ಅದರದೇ ಹಿರಿಮೆ!
ಮಳೆಯನ್ನ- ಅದು ಕೊಡುವ ಏನೋ ಒಂದು ಭರವಸೆಯನ್ನ, ಆ ತಂಪನ್ನ, ಘಮವನ್ನ ಅದೆಷ್ಟೇ ಪ್ರಯತ್ನಿಸಿದರೂ ಶಬ್ದಗಳಲ್ಲಿ ಹಿಡಿದಿಡಲಾಗುತ್ತಿಲ್ಲ  . ಮನಸ್ಸು ಮಲೆನಾಡಕಡೆ   ಸದ್ದಿಲ್ಲದೇ ಜಾರಿಕೊಳ್ಳುತ್ತಿದೆ.  
                                      ಹ್ಯಾಪಿ ಮುಂಗಾರು......


March 13, 2011

ತಲೆಬರಹ !

ಸಂಬಂಧಗಳು ಯಾಕೆ ಕೆಲವೊಮ್ಮೆ ಅಷ್ಟು ನಿಷ್ಟುರವಾಗಿಬಿಡುತ್ತವೆ? ಯಾಕೆ ನಾವು ಮತ್ತೆ ಅವುಗಳ ಬೆನ್ನುಹತ್ತಿ ಹೊರಡುವುದಿಲ್ಲ? ಜೀವನ ಅಷ್ಟೊಂದು ಜಟಿಲವೇ? ಅಥವಾ, ಅದು ತುಂಬಾ ಸರಳ, ನಾವೇ ಅದನ್ನ ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತಿದ್ದೆವೇನೋ? ಬದುಕಿನ ಕೆಲವು ಸರಳ ಸತ್ಯಗಳು ಅರ್ಥವಾದವನಿಗೆ ಸಮಸ್ಯೆಗಳು ಕಡಿಮೆ. Less complications ! ಈ ಸತ್ಯಗಳನ್ನು ಇನ್ನೊಬ್ಬರಿಗೆ ಅರ್ಥ ಮಾಡಿಸುವುದು ಕಷ್ಟ, ಎಲ್ಲ ಅವರವರ ಅನುಭವಕ್ಕೆ , ಅವರವರ ವಿಚಾರಕ್ಕೆ ತಕ್ಕಂತೆ! 

ಹೊರಗಡೆ ಬಿಸಿಲು ನಿಧಾನವಾಗಿ ಬಿಚ್ಚಿಕೊಳ್ಳತೊಡಗಿದೆ. ರವಿವಾರ. ಸುಮ್ಮನೆ ಬಿಸಿಲಿಗೆ ಮೈ ಒಡ್ಡಿ ಕುಳಿತಿದ್ದೇನೆ.ಏನೋ ಸಮಾಧಾನ.ಮನಸ್ಸಿನಲ್ಲಿ ಪ್ರಶಾಂತವಾದ ತಣ್ಣನೆಯ ಅಲೆಗಳು.ಗೊಂದಲಗಳಿಲ್ಲ.ಮೂರು ತಿಂಗಳ ಹಿಂದಷ್ಟೇ ಮನಸ್ಸೊಳಗೆ ಎದ್ದಿದ್ದ ಸುನಾಮಿಗಳ ಅಬ್ಬರ ದೂರದಲ್ಲೆಲ್ಲೋ ಕೇಳುತ್ತಿದೆ.

ಈ ಜಿಂದಗಿಗೆ ಎಷ್ಟು ಒಳ್ಳೆಯ ಕ್ಷಣಗಳನ್ನ, ಅವೆಷ್ಟು ಒಳ್ಳೆಯ ಸಂಬಂಧಗಳನ್ನ ಕೊಡುಗೆ ಕೊಡಲಾಗುತ್ತೋ ಅಷ್ಟನ್ನೂ ಕೊಡುವ ಸಣ್ಣ ಪ್ರಯತ್ನದಲ್ಲಿದ್ದೇನೆ. ನೀವೂ ಪ್ರಯತ್ನಿಸಿ ನೋಡಿ.ಏನಾದರೂ ಕಮಾಲ್ ನಡೆದು ಹೋದೀತು.....!?

February 17, 2011

ನಿಮ್ಮ ಜೊತೆ, ಮತ್ತೊಮ್ಮೆ!

ಬ್ಬ! ಎಂಥ ಎನರ್ಜಿ ಬೇಕು ಅಲ್ವ, ಈ ಜಿಂದಗಿಯಲ್ಲಿ. ಪ್ರತಿ ದಿನವೂ, ಪ್ರತಿ ಕ್ಷಣವೂ. ಯಾಮಾರುವ ಹಾಗೇ ಇಲ್ಲ. ನಾಳೆಯ ಖುಷಿಯನ್ನ ನಿರ್ಧರಿಸುವುದು ಈವತ್ತಿನ, ಈ ಹೊತ್ತಿನ ನಿರ್ಧಾರಗಳೇ. ಅದಕ್ಕೆ, ನಾನು ಈ ಬದುಕನ್ನ ನೋಡುವ ದೃಷ್ಟಿ ಕೊಂಚ ಬದಲಾಗಿದೆ. ನಾಳೆಗಳಲ್ಲಿ ನಾನಿರುವುದು ಕಡಿಮೆ! ಒಮ್ಮೆ, ಈ ಕ್ಷಣದಲ್ಲಿ-ಈ ದಿನದಲ್ಲಿ-ಮತ್ತು ಈವತ್ತಿನಲ್ಲಷ್ಟೇ ಬದುಕಿ ನೋಡಿ. ಹಾಗಂದ ಮಾತ್ರಕ್ಕೆ ನಾಳೆಯ ಯೋಚನೆಯೇ ಇರಬಾರದು ಎಂದಲ್ಲ. ಯಾವತ್ತೂ ಆದ್ಯತೆ ಇಂದಿಗಿರಲಿ, ನಾಳೆಗಲ್ಲ. ನಾಳೆ ಎನ್ನುವುದು ಬರೀ ಯೋಚನೆಯಲ್ಲಿ ಬಂದು ಹೋಗಬೇಕಷ್ಟೆ ಹೊರತು, ಅದು ಚಿಂತೆ ಆಗಬಾರದು! ಏನಂತೀರಾ?

February 7, 2011

ನಿಮ್ಮ ಜೊತೆ

ತುಂಬ ದಿನಗಳ ನಂತರ ಹೀಗೆ ಮತ್ತೆ ಕೂತು ಬರೆಯುತ್ತಿದ್ದೇನೆ. ನಿಮ್ಮ ಜೊತೆ ಅನಿಸಿದ್ದನ್ನೆಲ್ಲ ಹಂಚಿಕೊಳ್ಳುವುದರೆಲ್ಲಿ ಏನೋ ಸಂತೋಷ, ಸಮಾಧಾನ. I never want to be alone! ನನಗೆ ಒಂಟಿತನವೆಂದರೆ ಭಯಂಕರ ಭಯ.ಅದಕ್ಕೆ ಒಂಟಿ ಅನಿಸಿದಾಗಲೆಲ್ಲ ಜೊತೆ ನೀಡುವ ಗೆಳೆಯ ಈ ಬ್ಲಾಗ್. ಜಿಂದಗಿ ಎಲ್ಲಿಂದಲೋ ಹೊರಟಿದ್ದು, ಹಳಿಯಿಲ್ಲದ ರೈಲಿನಂತೆ ಈಗ ಎತ್ತೆತ್ತಲೋ ಸಾಗುತ್ತಿದೆ.. ಆದರೆ ಹೇಗೇ ಹೋಗಲಿ ಎಲ್ಲೇ ಹೋಗಲಿ ಗುರಿ ತಲುಪುವ ಕಡೆಗೆ ಸಾಗುತ್ತಿರುವುದೇ ಒಂದು ಸಮಾಧಾನ. ತುಂಬ ದಿನವಾಯಿತು, ಮನಸ್ಸಿನಲ್ಲಿ ಏನೋ ಹುಯ್ದಾಟ, ಏನೋ ಅಸ್ಪಷ್ಟತೆ, ಒಂಥರದ ಅಸಹನೆ. ಯಾವ ಸುಳಿವೂ ಸಿಗುತ್ತಿಲ್ಲ. ಅನಿಸಿದ್ದನ್ನ- ಅನಿಸುತ್ತಿರುವುದನ್ನ ಈ ಬಿಳಿಯ ಹಾಳೆಯ ಮೇಲೆ ಹಿಡಿದಿಡುವ ಪ್ರಯತ್ನ ಇನ್ನೂ ಸಾಗುತ್ತಲೇ ಇದೆ. ಅಲ್ಲೂ ಅಸ್ಪಷ್ಟತೆ. ಎಲ್ಲ ಕಡೆ ಏನೋ ಗೊಂದಲ! ನಿಮಗೇನಾದರೂ ಇದರ ಸುಳಿವಿದೆಯೇ?