Saturday, April 16, 2011

✍ ಸಮ್ಮರ್ ರೇನ್

ನಾನು ಕುಳಿತಿದ್ದ ಕೆಂಪು ಬಸ್ಸಿನ ವೈಪರ್ ಗಳು ಗಾಜಿನ ಮೇಲೆ ಮತ್ತೆ ಮತ್ತೆ ಬಂದು ಅಂಟಿಕೊಳ್ಳುತ್ತಿದ್ದ  ಮಳೆಯ ಹನಿಗಳನ್ನು ಒರೆಸುವ ವ್ಯರ್ಥ ಪ್ರಯತ್ನವನ್ನ ತಮ್ಮಪಾಡಿಗವು ಮುಂದುವರೆಸುತ್ತಿದ್ದವು. ಹೊರಗಡೆ ಮಬ್ಬು-ಕತ್ತಲೆಯ ವಾತಾವರಣ, ಮನಸೊಳಗೆಲ್ಲ ಒಂಥರದ ಬೆಳಕು! 

ಮಳೆ ಬಂದಾಗಲೇ ಏನಾದರೂ ಗೀಚಬೇಕು ಅನಿಸುವುದು, ಮನಸು ಬಿಚ್ಚಿಕೊಳ್ಳೋದು ! ಮಳೆಗಿರುವ ತಾಕತ್ತೇ ಅಂಥದು. ಒಮ್ಮೊಮ್ಮೆ ತುಂಬಾ ಬೇಜಾರಾದಾಗ ಮಳೆಯಾದರೂ ಬರಬಾರದೇ ಅನಿಸಿಬಿಡುವುದುಂಟು. ಅದೂ ಸಂಜೆಯ ಮಳೆ, ಆಹಾ! ಮಳೆ ಬಂದಾಗಲೆಲ್ಲ ನೆನಪಾಗುವುದು ನಮ್ಮೂರೇ, ಮಲೆನಾಡು! 
ಎಪ್ರಿಲ್-ಮೇ ತಿಂಗಳ ಬಿಸಿಲ ಬೇಸಿಗೆಗೆ ಮೈ ಒಡ್ಡಿ ಒದ್ದಾಡುವ ಭೂಮಿಗೆ ಮಳೆಯ ತವಕ. ಮಳೆಯ ಸ್ಪರ್ಶವಾಗುತ್ತಿದ್ದಂತೆ ಅನುಭವವಾಗುವ ಭೂಮಿತಾಯ ಕಂಪು, ಸಖ್ಖತ್ ತಂಪು!


ನೀವು ಏನೇ ಅನ್ನಿ, ಮುಂಗಾರಿಗಿಂತ ಮೊದಲು ಬರುವ ಈ ಬೇಸಿಗೆಯ ಅತಿಥಿಗಳೇ ತುಂಬಾ ಮಜಾ ಕೊಡುತ್ತವೆ. ಗುಡುಗು-ಸಿಡಿಲುಗಳ ಹಿಮ್ಮೇಳ ಮುಂಗಾರಿಗೆ ಕಡಿಮೆ. ಮುಂಗಾರಿಗೆ ಅದರದೇ ಹಿರಿಮೆ!
ಮಳೆಯನ್ನ- ಅದು ಕೊಡುವ ಏನೋ ಒಂದು ಭರವಸೆಯನ್ನ, ಆ ತಂಪನ್ನ, ಘಮವನ್ನ ಅದೆಷ್ಟೇ ಪ್ರಯತ್ನಿಸಿದರೂ ಶಬ್ದಗಳಲ್ಲಿ ಹಿಡಿದಿಡಲಾಗುತ್ತಿಲ್ಲ  . ಮನಸ್ಸು ಮಲೆನಾಡಕಡೆ   ಸದ್ದಿಲ್ಲದೇ ಜಾರಿಕೊಳ್ಳುತ್ತಿದೆ.  
                                      ಹ್ಯಾಪಿ ಮುಂಗಾರು……