July 9, 2013

...?

ತುಂಬ ದಿನಗಳಿಂದ ನನ್ನ ಯೋಚನೆ ತಪ್ಪು ಸರಿಗಳ ನಡುವೆ ಜೊತುಬಿದ್ದಿದೆ. ಏನೋ ಹೊಯ್ದಾಟ -ಅಸಮಾಧಾನ. ಯಾವುದರಲ್ಲೂ ಮೊದಲಿನ ಉತ್ಸಾಹ ಇಲ್ಲ. ಒಂಥರಾ ಮೊನೊಟೊನಸ್ ಅಂತಾರಲ್ಲ, ಹಂಗಾಗಿ ಹಿಂಗಾಗಿದೆ ಜಿಂದಗಿ.

   ಒಂದು ಚಂದನೆಯ ಚಿತ್ರ ಬಿಡಿಸಿ ವರ್ಷವಾಯಿತು. ಬರೆಯಲಿಕ್ಕೆ ಕೂತರೆ ಕೈ ಯಾಕೋ ಜಡ್ಡುಗಟ್ಟಿದ ಅನುಭವ, ಕಂಪ್ಯೂಟರ್ ನ ಕೀಬೋರ್ಡ್ ಕುಟ್ಟಿ ಕುಟ್ಟಿ . ಲೈಫು ಇಷ್ಟೇನಾ ಅನ್ನಿಸಿಬಿಡುತ್ತೆ ಒಮ್ಮೊಮ್ಮೆ. ಮದುವೆಯಾಗಿಬಿಡು ಮಾರಾಯಾ ಒಂದು ಅಂತ ಮಾತ್ರ ಸಲಹೆ ಕೊಡಬೇಡಿ, ಒಂದೇ ಸಾಕಾ ಅಂತ ಕೇಳಬೇಕಾದೀತು!

   ಇತ್ತೀಚಿಗೆ ಚಿತ್ರ ವಿಚಿತ್ರವಾದ ಯೋಚನೆಗಳು ಬರುತ್ತಿರುತ್ತವೆ. ಕೆಲವೊಂದು ಅದ್ಭುತ ಅಂತನಿಸಿದರೂ ಇನ್ಕೆಲವು ತಲೆ ಕೆಡಿಸಿಬಿಡುತ್ತವೆ . ಮನಸ್ಸಿನೊಳಗೆ ಸರಿ ತಪ್ಪುಗಳ ನಡುವೆ ಜಿದ್ದಾಜಿದ್ದಿನ ಹೋರಾಟ. ಈ ಕಾಂಕ್ರೀಟ್ ನಾಡನ್ನ ಬಿಟ್ಟು ಓಡಿಹೊಗಬೇಕೆನಿಸುತ್ತಿದೆ. ಬದುಕನ್ನ ಮತ್ತೆ ಬಾಲ್ಯದಿಂದ ಶುರುಮಾಡುವ ಒಂದು ಕೆಟ್ಟ ಆಸೆ. ಆ ಹಳೆಯ ನಮ್ಮೂರು ಬೇಕೆನಿಸುತ್ತಿದೆ. "ಟೆಕ್ನಾಲಜಿ" ಒಂದೇ ನಮ್ಮ ಬದುಕಾ!ಅದು ನಮ್ಮನ್ನ ಆಳುತ್ತಿರುವುದಂತೂ  ಸುಳ್ಳಲ್ಲ.  ಎಲ್ಲಾದರೂ ದೂರ ಹೋಗಿ ಭೂಮಿಗೆ ಬೆನ್ನೊಡ್ಡಿ ಮಲಗಿ ಮಳೆಗಾಲವನ್ನ ಸಂಪೂರ್ಣವಾಗಿ ಕಣ್ತುಂಬಿಕೊಳ್ಳುವ ಆಸೆ. ಪ್ರಕೃತಿಯ ಜೊತೆ ಒಂದು ಆತ್ಮೀಯವಾದ ಬಂಧ ಉಳಿಸಿಕೊಳ್ಳದಿದ್ದರೆ ಮನುಷ್ಯ ಹಾಳಾಗಿಬಿಡುತ್ತಾನೆ. ನಿಮಗೆ ಹೀಗೆ ಅಪರೂಪಕ್ಕಾದರೂ ಒಮ್ಮೆ ಬರೆಯದಿದ್ದರೆ ನಾನೂ ಅಷ್ಟೇ! ಬರವಣಿಗೆ ನಿಮಗೆ ತಲುಪಿದರಷ್ಟೇ ಸಾಕು!

   ಹಾಗೆ ನೋಡಿದರೆ ಎಲ್ಲರೂ ಇಲ್ಲೇ ಇದ್ದಾರೆ, ಆದರೆ ಯಾರೂ ಇಲ್ಲ. ಮೊನ್ನೆ ಅಪ್ಪ ಬಂದಿದ್ದ . ಇಷ್ಟು ವರ್ಷಗಳಲ್ಲಿ ಮೊದಲ ಬಾರಿ   ನಂಗನಿಸಿದ್ದು "ಅಪ್ಪನಿಗೆ  ವಯಸ್ಸಾಗಿದೆ ", ಅದಕ್ಕಿಂತ ಹೆಚ್ಚಾಗಿ ಆತ ತುಂಬ ದಣಿದಿದ್ದಾನೆ, ಬದುಕಲ್ಲಿ. ಇಂಜಿನಿಯರಿಂಗ್ ಅಂತ ಓದಿ ಅಮ್ಮನ ಆಸೆ ಈಡೇರಿಸಿದ್ದಾಯಿತು. ಯಾಕೋ ಅಪ್ಪನಿಗೆ ಜೊತೆಯಿದ್ದು ಹೆಗಲುಕೊಡಲಾಗುತ್ತಿಲ್ಲವಲ್ಲ ಅನ್ನುವ ಕೊರಗಿದೆ. ನೋಡೋಣ, ಈ ಬದುಕು ಮುಂದೆ ಹೇಗೆ ಸಾಗುತ್ತೋ  ಅಂತ, ನಿಲ್ಲದೇ ನಡೆಯುವುದೊಂದೇ ನಮ್ಮ ಕೆಲಸ !

April 30, 2013

ಸುಮ್ನೆ ಹಂಗೆ....  ಬೇಸಿಗೆಯ ಕಾವ್ ಏರಿ  ನೀರಿಲ್ಲ, ಬೆಂಗಳೂರಿಗೆ  ಇನ್ನೆರಡುತಿಂಗಳು ಕಾವೇರಿ ವಾರಕ್ಕೊಮ್ಮೆಯಾದರೆ ತಪ್ಪಿಲ್ಲ! ಬದಕು  3G -4G  ಸಿಗ್ನಲ್ಗಳ ಜೊತೆ ಜೋತುಬಿದ್ದಿದೆ. ಐಪಿಎಲ್  ನಿದ್ದೆಗೆಡಿಸುತ್ತಿದೆ. ಪೆನ್ನಿಗೆ ಕನ್ನಡ ಮರೆತುಹೋಗಿದೆ, ಪೆನ್ಸಿಲ್ ಗೆ  ಇರೆಸರ್ ಎಲ್ಲಿ ಖಾಲಿಯಾಗಿಬಿಡುವುದೋ ಎಂಬ ಚಿಂತೆ! ಒಂದೊಂದು ದಿನ ವೈಟ್ ಫೀಲ್ಡ್ ಮಳೆಯಲ್ಲಿ ತೋಯ್ದು ನಿಂತಿದ್ದರೆ ಇತ್ತ ಕಡೆ ಜಯನಗರದಲ್ಲಿ ಬಿರು ಬೇಸಿಗೆ! ಎಲೆಕ್ಷನ್ ಟೈಮ್ ಬೇರೆ !
  


ಸ್ವಾಮೀ, ಹಿಂಗಾದರೆ ಹೆಂಗೆ? ಅದಕ್ಕೇ, ಸುಮ್ನೆ ಹಂಗೆ.... 

          ಏನಿದೆ ಅವನಲ್ಲಿ ಹೊಸತು?
          ಅದೇ ಚಂದ್ರ-ಅದೇ ಬೆಳದಿಂಗಳು
          ಅದೇ ಕಪ್ಪು ಕಲೆ- ಅದೇ ಕಪ್ಪು ನೆಲೆ 
          ಅದೆಲ್ಲಿಂದ ಬಂದೀತು 
          ಪ್ರತಿಬಾರಿಯೂ ಹೊಸ ಕಾಂತಿ?
          ನಿನಗೆಲ್ಲೋ ಭ್ರಾಂತಿ!
                                        (ಕದ್ದಿದ್ದು )

ನಾಳೆಗಳಲ್ಲಿ ಬದುಕುವದರಲ್ಲಿ ಅರ್ಥವಿಲ್ಲ, ನಾಳೆ ಬರೀ ಜಾಳೇ ! ಇಂದಿಗೆ ಬದುಕಿಬಿಡಿ, ನಾಳೆ ಬದುಕಿದ್ದರೆ ಮತ್ತೆ ಬದುಕುವ. ಇವತ್ತಿನಲ್ಲಿ ಹೊಸತನವಿರಲಿ, ಈ ಹೊತ್ತಿನಲ್ಲಿ ಬದುಕಿರಲಿ. Just  Stay a-live !
     
        ಹೀಗೇ ಗೀಚುತ್ತಿರುತ್ತೇನೆ 
        ನಿಮ್ಮ ನೆನಪುಗಳ ಮಗುಚಿಹಾಕಿದಾಗ 
        ಅವುಗಳ ಜೊತೆಗೇ 
        ಬದುಕಬೇಕಲ್ಲ, ನೀವಿಲ್ಲದಿದ್ದಾಗ! 

ನನ್ನ ಬರವಣಿಗೆಯನ್ನೆಲ್ಲ ಸಹಿಸಿಕೊಂಡು ಬೆನ್ನುತಟ್ಟುತ್ತಿರುವ ನನ್ನೆಲ್ಲ ಮಿತ್ರರಿಗಾಗಿ.