Saturday, February 21, 2015

✍ ತಲೆಹರಟೆ

ಎಲ್ಲರೂ ಇದ್ದು, ಯಾರೂ ಇಲ್ಲದಂತೆ ಬದುಕುವುದು ತುಂಬ ಕಷ್ಟ. ನಮ್ಮವರ ಜೊತೆ ಬದುಕುವ ಜೀವನ ತುಂಬ ಚೆಂದ. ಮನೆಯೆಲ್ಲ ಖಾಲಿ ಖಾಲಿ, ಮನಸ್ಸು ಮಾತ್ರ ಒಂದಿಂಚೂ ಜಾಗ ಸಿಗದಂತೆ ತುಂಬಿಕೊಂಡಿದೆ .
 ಬದುಕಿದ್ದೇನೆ, ಬದುಕನ್ನ ಬದುಕುವ, ಜೀವನವನ್ನ  ಜೀವಿಸುವ ಪ್ರಯತ್ನದಲ್ಲಿದ್ದೇನೆ. ಹಳೇ ಹುಡುಗಿಗೆ ಹಳೆಯ ಮೊಬೈಲಿನಿಂದ ಕಳಿಸಿದ ಎಸ್ಸಮ್ಮೆಸ್ಸುಗಳು , ಸಂವಾದಗಳು ನೆನಪಾಗಿ, ಹಳೆಯ ಗೆಳತಿಗಾಗಿ ಹುಟ್ಟಿದ್ದ ಕವಿ-ಕವನಗಳು ಉಸಿರಾಡಿ, ಆ ಬಾಲ್ಯದ ಕ್ಷಣಗಳ್ಯಾವವೂ ಮತ್ತೆ ಸಿಗಲಾರದೇ ಅನ್ನುವ ಸತ್ಯ ಅರಿವಾಗಿ… ಅಬ್ಬ! ನಿನ್ನೆಗಳನ್ನೆಲ್ಲ ತಿರುವಿ ಹಾಕಿದರದೆಷ್ಟು ನೆನಪುಗಳು….

ಈ ಬೆಂ”ಧೂಳು”ರಿನಲ್ಲಿ  ಬದುಕು ಕಟ್ಟಿಕೊಳ್ಳುವವರು ಪುಣ್ಯವಂತರಂತೂ  ಅಲ್ಲ!ಯಾಕೆ ಅಂತೀರ? ಉತ್ತರ ನಿಮ್ಮಲ್ಲೇ ಸಿಗಬಹುದು, ಹುಡುಕಿಕೊಳ್ಳಿ . ಮೊದಲು ವಿದ್ಯಾಭ್ಯಾಸದ ಹೊಣೆ-ಹೊರೆ, ನಂತರ ಕೆಲಸ, ಪ್ರಮೋಷನ್ನು, ಸ್ವಂತ ಮನೆ-ಕಾರು, ಸ್ವಂತ  ವ್ಯಫು  !…..  ಒಟ್ಟಿನಲ್ಲಿ ಮುಗಿಯದ ಲೈಫು, ಬಿಟ್ಟೆನೆಂದರೂ ಬಿಡದೀ ಬೆಂಗಳೂರು ಮಾಯೆ!  ಸಿಗುವ ಮೂರು ದಿನದ ಬಾಳಿನಲ್ಲಿ ಅದೇನೆಲ್ಲ ಮಾಡಿ-ಇಟ್ಟು  ಹೋಗುತ್ತೆವಲ್ಲ? ನಮ್ಮ ಮುಂದಿನ ತಲೆಮಾರಿಗೆ ಕಟ್ಟಿಕೊಡುತ್ತಿರುವುದು ಬರೀ ಭೋಗದ ಬದುಕನ್ನಲ್ಲದೇ ಮತ್ತೇನೂ ಅಲ್ಲ. ಮನೆಯ ಗೋಡೆಗೆ ಅಂಟಿಸಿದ ಟೆಲಿವಿಷನ್ ಅನ್ನುವುದ ನಮ್ಮ “ವಿಷನ್ ” ಕಿತ್ತುಕೊಳ್ಳುತ್ತಿದೆ , ಮೊಬೈಲ್-ಟ್ಯಾಬ್ ಗಳು ಮಕ್ಕಳನ್ನ, ಅವರ ಬಾಲ್ಯವನ್ನ ಹಾಳುಗೆಡವುತ್ತಿವೆ.
ಸಂಸ್ಕಾರವಿಲ್ಲದ ಶಿಕ್ಷಣ, ಶಿಷ್ಟಾಚಾರವಿಲ್ಲದ ಬದುಕು ಮನುಷ್ಯನನ್ನ ಸ್ವಾರ್ಥಿ ಹಾಗೂ ಅಹಂಕಾರಿಯನ್ನಾಗಿಸುತ್ತಿದೆ. ಭಾಷೆ ಒಂದು ಸಂಸ್ಕೃತಿಯನ್ನ ಬಿಂಬಿಸುವ, ಅದನ್ನ ಕಾಪಾಡಿಕೊಳ್ಳುವ, ಸಂಬಂಧಗಳನ್ನ ಗಟ್ಟಿಗೊಳಿಸುವ ಸಂವೇದನೆಯಾಗದೆ ಅಳಿಸುತ್ತಿದೆ. ಎಲ್ಲ ಬಿಟ್ಟು, ನಾವು ಮುಖ ಮಾಡಿ ನಿಂತಿರುವುದು ಒಂದು ಸೆಕ್ಯುಲರ್ ಸಮಾಜದ ಕಡೆ. ಅದು ನಮ್ಮನ್ನ ಎಲ್ಲಿಯವರೆಗೆ ಎಳೆದೊಯ್ಯುತ್ತೊ ಗೊತ್ತಿಲ್ಲ. ಎಲ್ಲವನ್ನೂ ಬರೀ ಒಂದು ವ್ಯಾಪಾರದ ದೃಷ್ಟಿಯಿಂದ ನೋಡಲಾಗುತ್ತಿದೆ, ಸಂಬಂಧಗಳನ್ನೂ ಕೂಡ!
ಬಹುಶಃ ಟೆಕ್ನಾಲಜಿಯನ್ನ (ತಂತ್ರಜ್ಞಾನ) ಅದರ ಬಾಲ್ಯಾವಸ್ಥೆಯಿಂದ ಕಣ್ತುಂಬಿಕೊಂಡವರು ನನ್ನ-ನಿಮ್ಮ  ಪೀಳಿಗೆಯವರಷ್ಟೇ ಇರಬಹುದು, ಈಗಿನ ತಲೆಮಾರಿಗೆ ಆ ಅವಕಾಶ-ಅನುಭವವಿಲ್ಲ! ಈಗೇನಿದ್ದರೂ ಬೆರಳ ತುದಿಯಲ್ಲೇ ಬ್ರಹ್ಮಾಂಡ. ಕೃಷ್ಣ! ಕೃಷ್ಣ !