Saturday, February 21, 2015

✍ ತಲೆಹರಟೆ

ಎಲ್ಲರೂ ಇದ್ದು, ಯಾರೂ ಇಲ್ಲದಂತೆ ಬದುಕುವುದು ತುಂಬ ಕಷ್ಟ. ನಮ್ಮವರ ಜೊತೆ ಬದುಕುವ ಜೀವನ ತುಂಬ ಚೆಂದ. ಮನೆಯೆಲ್ಲ ಖಾಲಿ ಖಾಲಿ, ಮನಸ್ಸು ಮಾತ್ರ ಒಂದಿಂಚೂ ಜಾಗ ಸಿಗದಂತೆ ತುಂಬಿಕೊಂಡಿದೆ .
 ಬದುಕಿದ್ದೇನೆ, ಬದುಕನ್ನ ಬದುಕುವ, ಜೀವನವನ್ನ  ಜೀವಿಸುವ ಪ್ರಯತ್ನದಲ್ಲಿದ್ದೇನೆ. ಹಳೇ ಹುಡುಗಿಗೆ ಹಳೆಯ ಮೊಬೈಲಿನಿಂದ ಕಳಿಸಿದ ಎಸ್ಸಮ್ಮೆಸ್ಸುಗಳು , ಸಂವಾದಗಳು ನೆನಪಾಗಿ, ಹಳೆಯ ಗೆಳತಿಗಾಗಿ ಹುಟ್ಟಿದ್ದ ಕವಿ-ಕವನಗಳು ಉಸಿರಾಡಿ, ಆ ಬಾಲ್ಯದ ಕ್ಷಣಗಳ್ಯಾವವೂ ಮತ್ತೆ ಸಿಗಲಾರದೇ ಅನ್ನುವ ಸತ್ಯ ಅರಿವಾಗಿ… ಅಬ್ಬ! ನಿನ್ನೆಗಳನ್ನೆಲ್ಲ ತಿರುವಿ ಹಾಕಿದರದೆಷ್ಟು ನೆನಪುಗಳು….

ಈ ಬೆಂ”ಧೂಳು”ರಿನಲ್ಲಿ  ಬದುಕು ಕಟ್ಟಿಕೊಳ್ಳುವವರು ಪುಣ್ಯವಂತರಂತೂ  ಅಲ್ಲ!ಯಾಕೆ ಅಂತೀರ? ಉತ್ತರ ನಿಮ್ಮಲ್ಲೇ ಸಿಗಬಹುದು, ಹುಡುಕಿಕೊಳ್ಳಿ . ಮೊದಲು ವಿದ್ಯಾಭ್ಯಾಸದ ಹೊಣೆ-ಹೊರೆ, ನಂತರ ಕೆಲಸ, ಪ್ರಮೋಷನ್ನು, ಸ್ವಂತ ಮನೆ-ಕಾರು, ಸ್ವಂತ  ವ್ಯಫು  !…..  ಒಟ್ಟಿನಲ್ಲಿ ಮುಗಿಯದ ಲೈಫು, ಬಿಟ್ಟೆನೆಂದರೂ ಬಿಡದೀ ಬೆಂಗಳೂರು ಮಾಯೆ!  ಸಿಗುವ ಮೂರು ದಿನದ ಬಾಳಿನಲ್ಲಿ ಅದೇನೆಲ್ಲ ಮಾಡಿ-ಇಟ್ಟು  ಹೋಗುತ್ತೆವಲ್ಲ? ನಮ್ಮ ಮುಂದಿನ ತಲೆಮಾರಿಗೆ ಕಟ್ಟಿಕೊಡುತ್ತಿರುವುದು ಬರೀ ಭೋಗದ ಬದುಕನ್ನಲ್ಲದೇ ಮತ್ತೇನೂ ಅಲ್ಲ. ಮನೆಯ ಗೋಡೆಗೆ ಅಂಟಿಸಿದ ಟೆಲಿವಿಷನ್ ಅನ್ನುವುದ ನಮ್ಮ “ವಿಷನ್ ” ಕಿತ್ತುಕೊಳ್ಳುತ್ತಿದೆ , ಮೊಬೈಲ್-ಟ್ಯಾಬ್ ಗಳು ಮಕ್ಕಳನ್ನ, ಅವರ ಬಾಲ್ಯವನ್ನ ಹಾಳುಗೆಡವುತ್ತಿವೆ.
ಸಂಸ್ಕಾರವಿಲ್ಲದ ಶಿಕ್ಷಣ, ಶಿಷ್ಟಾಚಾರವಿಲ್ಲದ ಬದುಕು ಮನುಷ್ಯನನ್ನ ಸ್ವಾರ್ಥಿ ಹಾಗೂ ಅಹಂಕಾರಿಯನ್ನಾಗಿಸುತ್ತಿದೆ. ಭಾಷೆ ಒಂದು ಸಂಸ್ಕೃತಿಯನ್ನ ಬಿಂಬಿಸುವ, ಅದನ್ನ ಕಾಪಾಡಿಕೊಳ್ಳುವ, ಸಂಬಂಧಗಳನ್ನ ಗಟ್ಟಿಗೊಳಿಸುವ ಸಂವೇದನೆಯಾಗದೆ ಅಳಿಸುತ್ತಿದೆ. ಎಲ್ಲ ಬಿಟ್ಟು, ನಾವು ಮುಖ ಮಾಡಿ ನಿಂತಿರುವುದು ಒಂದು ಸೆಕ್ಯುಲರ್ ಸಮಾಜದ ಕಡೆ. ಅದು ನಮ್ಮನ್ನ ಎಲ್ಲಿಯವರೆಗೆ ಎಳೆದೊಯ್ಯುತ್ತೊ ಗೊತ್ತಿಲ್ಲ. ಎಲ್ಲವನ್ನೂ ಬರೀ ಒಂದು ವ್ಯಾಪಾರದ ದೃಷ್ಟಿಯಿಂದ ನೋಡಲಾಗುತ್ತಿದೆ, ಸಂಬಂಧಗಳನ್ನೂ ಕೂಡ!
ಬಹುಶಃ ಟೆಕ್ನಾಲಜಿಯನ್ನ (ತಂತ್ರಜ್ಞಾನ) ಅದರ ಬಾಲ್ಯಾವಸ್ಥೆಯಿಂದ ಕಣ್ತುಂಬಿಕೊಂಡವರು ನನ್ನ-ನಿಮ್ಮ  ಪೀಳಿಗೆಯವರಷ್ಟೇ ಇರಬಹುದು, ಈಗಿನ ತಲೆಮಾರಿಗೆ ಆ ಅವಕಾಶ-ಅನುಭವವಿಲ್ಲ! ಈಗೇನಿದ್ದರೂ ಬೆರಳ ತುದಿಯಲ್ಲೇ ಬ್ರಹ್ಮಾಂಡ. ಕೃಷ್ಣ! ಕೃಷ್ಣ !

Wednesday, April 2, 2014

✍ ಜಿಂದಗಿ ಕ್ಯಾ ಚೀಜಹೇ

 ದೇವರನ್ನೂ ಕೂಡ ಖಾಸಗಿಯಾಗಿ ಕಂಡು ಕೈ ಮುಗಿದುಬರುವ ನನಗೆ, ಹೀಗೆ ಸಾರ್ವಜನಿಕವಾಗಿ ಬ್ಲಾಗೊಂದನ್ನ ತೆರೆಯಬೇಕೆಂಬ ಹಂಬಲ ಅದು ಹೇಗೆ ಬಂತೋ ಗೊತ್ತಿಲ್ಲ! ಒಂದೊಂದು ದಿನ ಒಂಟಿ ಅನಿಸಿದಾಗ ಒಮ್ಮೆ ಈ ಬರವಣಿಗೆಗಳು ಅದಕ್ಕೆ ನಿಮ್ಮ ಅನಿಸಿಕೆಗಳನ್ನೆಲ್ಲ ತಿರುವಿ ಹಾಕಿದರಷ್ಟೇ ಸಾಕು, ಏನೋ ಒಂಥರದ ಸಮಾಧಾನ.
  ಜಗತ್ತು ಬದಲಾಗುತ್ತಿರುವ ವೇಗವನ್ನ ನೋಡುತ್ತಿದ್ದರೆ ಭಯವಾಗುತ್ತಿದೆ! ಏನನ್ನ ಸಾಧಿಸುವುದಕ್ಕಾಗಿ ಈ ಪರಿ ವೇಗ?ಟೆಕ್ನಾಲಜಿ ಅನ್ನುವ ಹೆಸರಲ್ಲಿ ಬದುಕಿನ ಸರಳತೆಯನ್ನ ಕಳೆದುಕೊಳ್ಳುತ್ತಿದ್ದೆವೇನೋ ಅನಿಸುತ್ತಿದೆ. ಒಂದೇ ಖುಷಿಯೆಂದರೆ, ನಮ್ಮ ಬಾಲ್ಯವನ್ನ ಇಷ್ಟೊಂದು ಗ್ಯಾಜೆಟ್ ಗಳ ನಡುವೆ ಕಳೆದಿಲ್ಲ.  ಬಾಲ್ಯದ ನೆನಪು ಯಾವಾಗಲೂ ಹಸಿರು. ನಮ್ಮ ಸುತ್ತ ಒಂದು ‘ವರ್ಚುಯಲ್ ‘ ಜಗತ್ತನ್ನ ಸೃಷ್ಟಿಸಿಕೊಂಡು, ಅದರಲ್ಲೇ ಕಾಲಹರಣ ಮಾಡುತ್ತಿದ್ದೇವೆ. ಮೊದಿಲನ ಆತ್ಮೀಯತೆ ಉಳಿದಿಲ್ಲ ! ಎಲ್ಲರೂ whatsApp,Facebook ಗಳಲ್ಲಿ ತೂರಿಕೊಂಡು ಹೊರಬರಲಾಗದೆ ಚಡಪಡಿಸುತ್ತಿರುವ  ಮೀನುಗಳೇ . ನಾವು ಅವುಗಳನ್ನ ಬಿಟ್ಟರೂ ಅವು ನಮ್ಮನ್ನ ಬಿಡವು ! ಕೊನೆಯಪಕ್ಷ ಆತ್ಮೀಯರ ಜನ್ಮದಿನದ ಶುಭ ಸಂದರ್ಭದಲ್ಲಾದರೂ  ಅವರಿಗೆ ಖುದ್ದಾಗಿ ಪೋನಾಯಿಸಿ ಮಾತಾಡುವ ಒಂದು ದುರಭ್ಯಾಸವನ್ನ ಬೆಳೆಸಿಕೊಳ್ಳುವುದು ಉತ್ತಮ.
  ಬಿಳಿ ಹಾಳೆಯಮೇಲೆ ಇವನ್ನೆಲ್ಲ ಬರೆದದ್ದಾಯಿತು, ಈಗ ಅದನ್ನ ಬ್ಲಾಗಲ್ಲಿ ತುಂಬುವ ಕೆಲಸಕ್ಕೆ ಗೂಗಲ್ ವಾಯ್ಸ್ ನ ಮೊರೆ ಹೋದರೆ ಹೇಗೆ? ಕೀಬೋರ್ಡ್ ನಲ್ಲಿ ಇವನ್ನೆಲ್ಲ ಕುಟ್ಟಲಿಕ್ಕೆ ಬೇಜಾರು (:p). ಆಚೆ ಬಿಸಿಲ ತಾಪ, ಇನ್ನೆರಡು ತಿಂಗಳು ಚುನಾವಣೆಯ ಶಾಪ.  ಬದುಕು ಬಿರು ಬೇಸಿಗೆಯಾಗಿಬಿಟ್ಟಿದೆ, ಕೊಂಚ ಮಳೆ ಬಂದು ತಂಪೆರೆಯ ಬಾರದೇ!

Tuesday, July 9, 2013

✍ ಅಂತರ್ಮುಖಿ

ತುಂಬ ದಿನಗಳಿಂದ ನನ್ನ ಯೋಚನೆ ತಪ್ಪು ಸರಿಗಳ ನಡುವೆ ಜೊತುಬಿದ್ದಿದೆ. ಏನೋ ಹೊಯ್ದಾಟ -ಅಸಮಾಧಾನ. ಯಾವುದರಲ್ಲೂ ಮೊದಲಿನ ಉತ್ಸಾಹ ಇಲ್ಲ. ಒಂಥರಾ ಮೊನೊಟೊನಸ್ ಅಂತಾರಲ್ಲ, ಹಂಗಾಗಿ ಹಿಂಗಾಗಿದೆ ಜಿಂದಗಿ.
   ಒಂದು ಚಂದನೆಯ ಚಿತ್ರ ಬಿಡಿಸಿ ವರ್ಷವಾಯಿತು. ಬರೆಯಲಿಕ್ಕೆ ಕೂತರೆ ಕೈ ಯಾಕೋ ಜಡ್ಡುಗಟ್ಟಿದ ಅನುಭವ, ಕಂಪ್ಯೂಟರ್ ನ ಕೀಬೋರ್ಡ್ ಕುಟ್ಟಿ ಕುಟ್ಟಿ . ಲೈಫು ಇಷ್ಟೇನಾ ಅನ್ನಿಸಿಬಿಡುತ್ತೆ ಒಮ್ಮೊಮ್ಮೆ. ಮದುವೆಯಾಗಿಬಿಡು ಮಾರಾಯಾ ಒಂದು ಅಂತ ಮಾತ್ರ ಸಲಹೆ ಕೊಡಬೇಡಿ, ಒಂದೇ ಸಾಕಾ ಅಂತ ಕೇಳಬೇಕಾದೀತು!
   ಇತ್ತೀಚಿಗೆ ಚಿತ್ರ ವಿಚಿತ್ರವಾದ ಯೋಚನೆಗಳು ಬರುತ್ತಿರುತ್ತವೆ. ಕೆಲವೊಂದು ಅದ್ಭುತ ಅಂತನಿಸಿದರೂ ಇನ್ಕೆಲವು ತಲೆ ಕೆಡಿಸಿಬಿಡುತ್ತವೆ . ಮನಸ್ಸಿನೊಳಗೆ ಸರಿ ತಪ್ಪುಗಳ ನಡುವೆ ಜಿದ್ದಾಜಿದ್ದಿನ ಹೋರಾಟ. ಈ ಕಾಂಕ್ರೀಟ್ ನಾಡನ್ನ ಬಿಟ್ಟು ಓಡಿಹೊಗಬೇಕೆನಿಸುತ್ತಿದೆ. ಬದುಕನ್ನ ಮತ್ತೆ ಬಾಲ್ಯದಿಂದ ಶುರುಮಾಡುವ ಒಂದು ಕೆಟ್ಟ ಆಸೆ. ಆ ಹಳೆಯ ನಮ್ಮೂರು ಬೇಕೆನಿಸುತ್ತಿದೆ. “ಟೆಕ್ನಾಲಜಿ” ಒಂದೇ ನಮ್ಮ ಬದುಕಾ!ಅದು ನಮ್ಮನ್ನ ಆಳುತ್ತಿರುವುದಂತೂ  ಸುಳ್ಳಲ್ಲ.  ಎಲ್ಲಾದರೂ ದೂರ ಹೋಗಿ ಭೂಮಿಗೆ ಬೆನ್ನೊಡ್ಡಿ ಮಲಗಿ ಮಳೆಗಾಲವನ್ನ ಸಂಪೂರ್ಣವಾಗಿ ಕಣ್ತುಂಬಿಕೊಳ್ಳುವ ಆಸೆ. ಪ್ರಕೃತಿಯ ಜೊತೆ ಒಂದು ಆತ್ಮೀಯವಾದ ಬಂಧ ಉಳಿಸಿಕೊಳ್ಳದಿದ್ದರೆ ಮನುಷ್ಯ ಹಾಳಾಗಿಬಿಡುತ್ತಾನೆ. ನಿಮಗೆ ಹೀಗೆ ಅಪರೂಪಕ್ಕಾದರೂ ಒಮ್ಮೆ ಬರೆಯದಿದ್ದರೆ ನಾನೂ ಅಷ್ಟೇ! ಬರವಣಿಗೆ ನಿಮಗೆ ತಲುಪಿದರಷ್ಟೇ ಸಾಕು!
   ಹಾಗೆ ನೋಡಿದರೆ ಎಲ್ಲರೂ ಇಲ್ಲೇ ಇದ್ದಾರೆ, ಆದರೆ ಯಾರೂ ಇಲ್ಲ. ಮೊನ್ನೆ ಅಪ್ಪ ಬಂದಿದ್ದ . ಇಷ್ಟು ವರ್ಷಗಳಲ್ಲಿ ಮೊದಲ ಬಾರಿ   ನಂಗನಿಸಿದ್ದು “ಅಪ್ಪನಿಗೆ  ವಯಸ್ಸಾಗಿದೆ “, ಅದಕ್ಕಿಂತ ಹೆಚ್ಚಾಗಿ ಆತ ತುಂಬ ದಣಿದಿದ್ದಾನೆ, ಬದುಕಲ್ಲಿ. ಇಂಜಿನಿಯರಿಂಗ್ ಅಂತ ಓದಿ ಅಮ್ಮನ ಆಸೆ ಈಡೇರಿಸಿದ್ದಾಯಿತು. ಯಾಕೋ ಅಪ್ಪನಿಗೆ ಜೊತೆಯಿದ್ದು ಹೆಗಲುಕೊಡಲಾಗುತ್ತಿಲ್ಲವಲ್ಲ ಅನ್ನುವ ಕೊರಗಿದೆ. ನೋಡೋಣ, ಈ ಬದುಕು ಮುಂದೆ ಹೇಗೆ ಸಾಗುತ್ತೋ  ಅಂತ, ನಿಲ್ಲದೇ ನಡೆಯುವುದೊಂದೇ ನಮ್ಮ ಕೆಲಸ !

Saturday, May 12, 2012

✍ ನಿಮ್ಮ ಜೊತೆ

Can I have my life reconciled? ಈಥರದ ಪ್ರಶ್ನೆಗಳನ್ನ ಕಳೆದ ಆರೇಳು ವರ್ಷಗಳಿಂದ ಕೇಳುತ್ತಿದ್ದೇನೆ.ಯಾರ ಬಳಿಯೂ ಅಲ್ಲ, ಅವು ನನ್ನೊಳಗೆ ಕೇಳಿಕೊಂಡಿದ್ದು . ಈ ಬದುಕು ಏನೆಂಬುದೇ ಅರ್ಥವಾಗುತ್ತಿಲ್ಲ .ಜಿಂದಗಿ ಕೂಲಾಗಿರಲಿಕ್ಕೆ ನೀವೇನಾದರೂ ಕೂಲಾದ ಕೆಲಸ ಮಾಡಿರೇಕು ಇಲ್ಲವೇ ಅಷ್ಟೇ ತಣ್ಣನೆಯ ನಿರ್ಧಾರಗಳನ್ನ ತೆಗೆದುಕೊಂಡಿರಬೇಕು. ಇಲ್ಲವಾದರೆ ಬದುಕು ಬಿರು ಬೇಸಿಗೆ. I was always hot !!

  ಯಾವುದಾದರೂ ಯಾರೂ ಪರಿಚಿತರಿಲ್ಲದ ಊರಿಗೆ ಹೋಗಿ ಇದ್ದುಬಿಡಬೇಕೆನಿಸುತ್ತಿದೆ.ನಾನು -ನನ್ನ ಬರವಣಿಗೆ-ಪೇಂಟಿಂಗ್ -ಸಂಗೀತ-ನಳಪಾಕ, ಇವಿಷ್ಟೇ! ಒಂದರ್ಧ ವರ್ಷ ಹೀಗೆ..
 ಇಂಜಿನೀರಿಂಗ್ ಓದುವಾಗ ಅದೆಷ್ಟು ಕನ್ಫ್ಯೂಸ್ ಆಗಿದ್ದೆ ಗೊತ್ತಾ? ಇಂಜಿನೀರಿಂಗ್ ಮಾಡಬೇಕಿತ್ತಾ?ಪಿಯುನಲ್ಲಿ ಫೇಲ್ ಆದೇನಾ (ನನ್ನ ಮಟ್ಟಿಗೆ ಫೇಲ್ ಆಗುವುದೆಂದರೆ ಬರೀ ಅಂಕಗಳ ಲೆಕ್ಕದಲ್ಲಿ ಅಲ್ಲ!)? B.Sc.Agri ಯಾಕೆ ಮಾಡಲಿಲ್ಲ? ಯಾಕೆ ಮೆರಿಟ್ ಲಿಸ್ಟಿನಲ್ಲಿದ್ದರೂ PCMB ಸಿಗಲಿಲ್ಲ (-ಕಾರಣ, ಅವತ್ತು ನಾನು ಮೆರಿಟ್ ಸೀಟಿಗಾಗಿ ಕಾಯುತ್ತಿದ್ದರೆ ಆಕಡೆ ಡೊನೆಶನ್ ಗಿರಾಕಿಗಳು ಅದಾಗಲೇ ಆ ಸೀಟುಗಳನ್ನ ಖರೀದಿಸಿಯಾಗಿತ್ತು !) ? ಪೇಂಟಿಂಗ್ ಕೋರ್ಸ್ ಕಡೆ ಹೊರಟುಬಿಡಬೇಕಿತ್ತಾ?ಸಂಗೀತದಲ್ಲಿ ಏನಾದರೂ ಭವಿಷ್ಯವಿತ್ತಾ? ನಾನ್ಯಾಕೆ ಕೆಲವೊಮ್ಮೆ ಅಷ್ಟೊಂದು ‘reserved’? ಯಾವುದಾದರೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರರ್ ಆಗಿ ತೂರಿಕೊಂಡುಬಿಡಲಾ?….ಹೀಗೆ ಹತ್ತು ಹಲವು ಪ್ರಶ್ನೆಗಳು ನನ್ನನ್ನ ಕಾಡಿದ್ದುಂಟು. ಕೆಲವು ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗೇ ಉಳಿದುಕೊಂಡಿವೆ.

  ಒಂದು ಚಂದನೆಯ ಪೇಂಟಿಂಗ್ ಮಾಡಿ ವರ್ಷವಾಯಿತು.ಇನ್ನಾದರೂ ಸಮಯವನ್ನ ವ್ಯರ್ಥ ಮಾಡುವುದರಬದಲು, let me make the best use of rest of my life. 

ಏನಾದರೂ ಉಚಿತ ಖಾಸಗೀ ಸಲಹೆಗಳಿವೆಯೇ?

Saturday, April 16, 2011

✍ ಸಮ್ಮರ್ ರೇನ್

ನಾನು ಕುಳಿತಿದ್ದ ಕೆಂಪು ಬಸ್ಸಿನ ವೈಪರ್ ಗಳು ಗಾಜಿನ ಮೇಲೆ ಮತ್ತೆ ಮತ್ತೆ ಬಂದು ಅಂಟಿಕೊಳ್ಳುತ್ತಿದ್ದ  ಮಳೆಯ ಹನಿಗಳನ್ನು ಒರೆಸುವ ವ್ಯರ್ಥ ಪ್ರಯತ್ನವನ್ನ ತಮ್ಮಪಾಡಿಗವು ಮುಂದುವರೆಸುತ್ತಿದ್ದವು. ಹೊರಗಡೆ ಮಬ್ಬು-ಕತ್ತಲೆಯ ವಾತಾವರಣ, ಮನಸೊಳಗೆಲ್ಲ ಒಂಥರದ ಬೆಳಕು! 

ಮಳೆ ಬಂದಾಗಲೇ ಏನಾದರೂ ಗೀಚಬೇಕು ಅನಿಸುವುದು, ಮನಸು ಬಿಚ್ಚಿಕೊಳ್ಳೋದು ! ಮಳೆಗಿರುವ ತಾಕತ್ತೇ ಅಂಥದು. ಒಮ್ಮೊಮ್ಮೆ ತುಂಬಾ ಬೇಜಾರಾದಾಗ ಮಳೆಯಾದರೂ ಬರಬಾರದೇ ಅನಿಸಿಬಿಡುವುದುಂಟು. ಅದೂ ಸಂಜೆಯ ಮಳೆ, ಆಹಾ! ಮಳೆ ಬಂದಾಗಲೆಲ್ಲ ನೆನಪಾಗುವುದು ನಮ್ಮೂರೇ, ಮಲೆನಾಡು! 
ಎಪ್ರಿಲ್-ಮೇ ತಿಂಗಳ ಬಿಸಿಲ ಬೇಸಿಗೆಗೆ ಮೈ ಒಡ್ಡಿ ಒದ್ದಾಡುವ ಭೂಮಿಗೆ ಮಳೆಯ ತವಕ. ಮಳೆಯ ಸ್ಪರ್ಶವಾಗುತ್ತಿದ್ದಂತೆ ಅನುಭವವಾಗುವ ಭೂಮಿತಾಯ ಕಂಪು, ಸಖ್ಖತ್ ತಂಪು!


ನೀವು ಏನೇ ಅನ್ನಿ, ಮುಂಗಾರಿಗಿಂತ ಮೊದಲು ಬರುವ ಈ ಬೇಸಿಗೆಯ ಅತಿಥಿಗಳೇ ತುಂಬಾ ಮಜಾ ಕೊಡುತ್ತವೆ. ಗುಡುಗು-ಸಿಡಿಲುಗಳ ಹಿಮ್ಮೇಳ ಮುಂಗಾರಿಗೆ ಕಡಿಮೆ. ಮುಂಗಾರಿಗೆ ಅದರದೇ ಹಿರಿಮೆ!
ಮಳೆಯನ್ನ- ಅದು ಕೊಡುವ ಏನೋ ಒಂದು ಭರವಸೆಯನ್ನ, ಆ ತಂಪನ್ನ, ಘಮವನ್ನ ಅದೆಷ್ಟೇ ಪ್ರಯತ್ನಿಸಿದರೂ ಶಬ್ದಗಳಲ್ಲಿ ಹಿಡಿದಿಡಲಾಗುತ್ತಿಲ್ಲ  . ಮನಸ್ಸು ಮಲೆನಾಡಕಡೆ   ಸದ್ದಿಲ್ಲದೇ ಜಾರಿಕೊಳ್ಳುತ್ತಿದೆ.  
                                      ಹ್ಯಾಪಿ ಮುಂಗಾರು……