Showing posts with label Sports. Show all posts
Showing posts with label Sports. Show all posts

Friday, May 6, 2016

✍ ಮತ್ತೆ ಮಳೆ ಹುಯ್ಯುತಿದೆ…

ಜನವರಿಯ ನಂತರ ಬಿಸಿ ನೀರ ಜಳಕ ಹಿತವೆನಿಸಿದ್ದು ಈವತ್ತೇ! ಒಂಥರ “a complete day” ಅಂತನಿಸಿತು. ತುಂಬಾ ದಿನಗಳ ನಂತರ ಬಿಎಂಟಿಸಿಯಲ್ಲಿ ಪ್ರಯಾಣ, ಹಳೆಯ ಸೋಲು-ಅವಮಾನ ಮರೆಸುವಂಥ ಒಂದು ಚಂದನೆಯ ವೊಲಿಬಾಲ್ ಪಂದ್ಯಾವಳಿ ಗೆದ್ದ ಖುಷಿ,ಬೆವೆತು ಬೆಂದಿದ್ದ ಮೈ ಮನಸ್ಸಿಗೆ ತಂಪೆರೆದ ಮಳೆ, ದಾರಿಯಲ್ಲಿ ಒಂದು ಅದ್ಭುತ ಟೀ, ಮತ್ತೆ ಸಂಜೆ ಆಫೀಸ್ ಕ್ಯಾಬ್ ನಲ್ಲಿ ಮನೆಯ ಕಡೆ ಪಯಣ, ಹಾಡು ಹರಟೆ, ಮಳೆಯಲ್ಲಿ ಮನೆ ಸೇರಿಕೊಳ್ಳುವ ಧಾವಂತದ ನಡಿಗೆ, ಹಿತವೆನಿಸಿದ ಬಿಸಿ ನೀರ ಜಳಕ, ಒಂದು ಚಿಕ್ಕ ಬ್ಲಾಗ್ ಬರಹ!
Office “Summer Smash” volleyball 2016-Champions

ಈ ತರಹದ ಮಳೆ ಬಂದಾಗಲೆಲ್ಲ ಗೆಳೆಯ ಮಹೆಂದ್ರನ ತಣ್ಣನೆಯ ಅಣಕದ ಮೆಸೇಜ್ “ನೋಡ್ರಪ್ಪಾ ಮಳೆ ಬಂತು, ವಿವೇಕಂದು ಬ್ಲಾಗ್ ಪೋಸ್ಟ್ ಬತ್ತು ಈಗ”. ಏನ್ಮಾಡೊದು, ನಮಗೆ ಮೂಡ್ ಬರುವುದೇ ಮಳೆ ಬಂದಮೇಲೆ, ಬರೆಯಲಿಕ್ಕೆ! ಈ ಸಾರಿ ಯಾಕೋ ಹುಡುಗನ ಸುಳಿವಿಲ್ಲ. ಬಿಡಿ ಈಗ ತಾನೇ ಮದುವೆ ಆಗಿದ್ದಾನೆ, ಸಂಸಾರಿ ಪಾಪ! 😉

ಬದುಕಿರುವ ಪ್ರತೀ ದಿನವೂ ಹೀಗೇ ಇದ್ದರೆ ಎಷ್ಟು ಚಂದ ಅನಿಸುತ್ತದೆ. ದಿನವೂ ಹೊಸದು ಹೊಸತು. “Stagnation” ಅನ್ನುವ ಪದವೇ ನಮಗೊಂಥರ ಅಲರ್ಜಿ! ಈವತ್ತಿನ ಹಾಗೇ ನಾಳೆ ಇದ್ದರೆ ಏನು ಚಂದ?

ಇವತ್ತಿನಲ್ಲಿ ಬದುಕಿರಲಿ, ನಾಳೆಯಲ್ಲಿ ಹೂಸದಿರಲಿ….☺




Wednesday, September 29, 2010

✍ ಅದೇ ದಾರಿ

ಪೆನ್ನಿನ ಬಾಯಿ ತೆಗೆದು ಹೀಗೆ ಬಿಳಿ ಹಾಳೆಯ ಮೇಲೆ ಗೀಚಿ ತುಂಬ ದಿನ ಆಗಿ ಹೋಗಿದೆ. ಹೊರಗಡೆ ಮಳೆರಾಯನ ತಣ್ಣನೆಯ ಸದ್ದು, ಕರೆಂಟ್ ಇಲ್ಲ, ಸಂಜೆಯ ಮಬ್ಬು, ನಾನಿರುವ ಚಿಕ್ಕ ಮನೆಯ ಒಳಗೆ ಸಣ್ಣಗೆ ಅರ್ಧ ಉರಿದು ಬೆಳಗುತ್ತಿರುವ ಎರಡು ಹಸಿರು ಮೇಣದಬತ್ತಿಗಳು…ಕತ್ತಲಾಗುವವರೆಗೆಹೈಸ್ಕೂಲ್ನ ಕೆಂಪು ಮಣ್ಣಿನ ಮೈದಾನದಲ್ಲಿ ವಾಲಿಬಾಲ್ ಆಡಿ ಮನೆಗೆ ಹಿಂತಿರುಗುತ್ತಿದ್ದೀನೇನೋ ಅನ್ನಿಸುತ್ತಿದೆ..ಅದೇ ನೆನಪು… ಹೈಸ್ಕೂಲ್ ನೆನಪು ಯಾವಾಗಲೂ ತುಂಬ ಖುಷಿ ಕೊಡುತ್ತೆ.
ಶಾಸ್ತ್ರಿ ಮಾಸ್ತರ್ ಅವರ ‘ಶಾಯಿ ಪೆನ್’(ink pen ) ರೂಲು, ಅವರು ಬಳಸುತ್ತಿದ್ದ ಸಣ್ಣ ಏರಿಯಲ್ ಪಾಯಿಂಟರ್, ಮಾರ್ಕಾoಡೆ ಅಕ್ಕೋರ ಸೈನ್ಸ್ ಹಾಲ್ ಕ್ಲಾಸ್, ಸಹದೇವಪ್ಪನವರ ಸೀಟಿ, ನಾಗವೇಣಿ ಅಕ್ಕೋರ ಸಂಸ್ಕೃತ ಶ್ಲೋಕ- ಅವರು ಧಾಟಿ ಮಾಡಿ ಹೇಳುತ್ತಿದ್ದ ಆ ವರಸೆ, ಆರ್.ಎಸ್. ಹೆಗಡೆ ಅವರ ಸ್ಟೈಲ್, ಅವರ ಚಿತ್ರ ವಿಚಿತ್ರ ಜೋಕುಗಳು, ಒಮ್ಮೊಮ್ಮೆ ಭಯ ಹುಟ್ಟಿಸುವ ಅವರ ಗಂಭೀರ ವ್ಯಕ್ತಿತ್ವ ….ಇನ್ನೂ ಇನ್ನಷ್ಟೂ..ಎಲ್ಲ ಇನ್ನೂ ಹಾಗೆ ಜೀವಂತವಾಗಿ ಮನಸ್ಸಿನಲ್ಲಿವೆ. ನಾನು ನಿಜವಾಗಲೂ ಮಿಸ್ ಮಾಡಿಕೊಂಡಿದ್ದು ಕೆ.ಜಿ. ಹೆಗಡೆ ಅವರನ್ನ. ಕ್ರಾಫ್ಟ್, ಹಿಸ್ಟರಿ, ಡ್ರಾಯಿಂಗ್ ಕ್ಲಾಸ್ ಟೀಚರ್ ಆಗಿದ್ದವರು ಅವರು.
ಕ್ರಾಫ್ಟ್ ಪಿರಿಯಡ್ ನಲ್ಲಿ ಹೈಸ್ಕೂಲ್ ತೋಟಕ್ಕೆ ನುಗ್ಗಿದರೆ ಹಬ್ಬವೋ ಹಬ್ಬ. ಅಲ್ಲಿನ ಪೇರಳೆ- ಮಾವಿನ ಮರಗಳು ಇಂದಿಗೂ ಪರಿಚಿತರೆ! ನಾಗರಕೂರದ ಒಳದಾರಿ, ಕ್ಲಾಸ್ಗಳೆಲ್ಲ ಮುಗಿದಮೇಲೆ ಆಡುತ್ತಿದ್ದ ಕ್ರಿಕೆಟ್-ವಾಲಿಬಾಲ್, ಕತ್ತಲಾಗುವವರೆಗೆ ಅಲ್ಲೇ ವಿನಾಯಕ ಮಾಸ್ತರ ಜೊತೆ ಹರಟೆ. ಆಮೇಲೆ ಮನೆಗೆ ಒಬ್ಬನೇ ನಡೆದು ಹೋಗುತ್ತಿದ್ದರೆ ಸಿಗುತ್ತಿದ್ದ ಆ ಆನಂದ- ಬೇಗ ಮನೆ ಸೇರಬೇಕೆಂಬ ಅಲ್ಲಿದ್ದ ಚಿಕ್ಕ ಧಾವಂತ, ಎಲ್ಲವೂ ಹಾಗೇ ಕಣ್ಣಮುಂದೆ ಒಮ್ಮೆ ಬಂದು ಹೋಗುತ್ತಿವೆ….