Tuesday, January 29, 2019

✍ ಮಾತು ಮಂಥನ

ಮಾತಿನಲ್ಲಿ ಮನೆ ಕಟ್ಟಬಹುದಂತೆ, ಮಾತು ಮನಸ್ಸನ್ನ ಕೆಡಿಸಬಹುದಂತೆ. ಮೌನವೇ ಮಾತಾದಾಗ ಇದ್ಯಾವುದರ ತಲೆಬಿಸಿ ಇಲ್ಲ ನೋಡಿ. ಮಾತಿಗೆಲ್ಲಿಂದ ತೂಕ? ಆದರೆ  ಹಗುರವಾಗಿ ಮಾತಾಡುವನನ್ನ ಈ ಜಗತ್ತು ಯಾವತ್ತೂ ತೂಗುವುದಿಲ್ಲ. ತೂಕದ ಮಾತಾಡಿ, ಸೂತಕದ ಮಾತಲ್ಲ!
ಎಲ್ಲರಿಗೂ ಗೌರವ ಕೊಟ್ಟು ಮಾತಾಡುವುದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಹೊರತು ಮತ್ತೇನೂ ಅಲ್ಲ.

ನಾವು ಏನು ನೋಡುತ್ತೇವೋ, ಏನು ಓದುತ್ತೀವೋ, ನಮ್ಮ ಅನುಭವಗಳಿಂದ, ಈ ಪ್ರಕ್ತೃತಿಯಿಂದ ಏನೂ ಕಲಿಯದೆ ಹೋದರೆ ಈ ಹುಟ್ಟಿಗೊಂದು ಅರ್ಥ ಎಲ್ಲಿ? ದೇಹಕ್ಕೆ ವಯಸ್ಸಾಗುತ್ತದೆ ಹೊರತೂ ಬುದ್ಧಿಗೆ ಎಲ್ಲಿಂದ ಆಹಾರ? ಬರೀ ಸುಳ್ಳುಗಳಲ್ಲೇ ಜೀವಿಸುತ್ತೆವೆಯೇ ಹೊರತು ಸತ್ಯದಲ್ಲಲ್ಲ ಹಾಗೂ ಸತ್ಯವಿಲ್ಲದ ಬಾಳು ಅದು ಸತ್ತಂತೆ.

ಜೀವನದಲ್ಲಿ ನಾವು ಸಣ್ಣ ಪುಟ್ಟ ವಿಚಾರಗಳನ್ನೇ ಗಂಭೀರವಾಗಿ ಪರಿಗಣಿಸಿ, ಬೇಕಾದವನ್ನೆಲ್ಲ ಕಡೆಗಣಿಸಿ, ಗುಣಿಸಿ, ಕೂಡಿ  ಕಳೆದು ಅಳಿಸಿ, ಆಕಳಿಸುವುದೇ ಹೆಚ್ಚು. ಗಳಿಸಿದ್ದೇನು, ಉಳಿಸಿದ್ದು ಯಾರಿಗೆ? ಆಳಿ ಅಳಿದ ಮೇಲೆ ಉಳಿದದ್ದೇನು? ತಾವೂ ಸುಖ ಪಡದೇ, ಇತರರಿಗೂ ಬಿಡದೇ, ಸದಾ ಕೊರಗಿ, ಕರಗಿ, ಬೆರೆಯದೇ ಹೋದರೇನು ಬಂತು. ಬದುಕನ್ನ ಪ್ರೀತಿಸದೇ, ಅದನ್ನ ಸ್ವೀಕರಿಸದೆ ನಡೆದರೆ ದುಃಖ ತಪ್ಪಿದ್ದಲ್ಲ. ತಪ್ಪು ನಮದೆಲ್ಲ. ಬಹುಶಃ ಯಾವ ಜೀವಿಯೂ ನಾನು ಹೀಗೇ ಇರಬೇಕೆಂದು ಹಾತೊರೆದು ಬದುಕುವುದಿಲ್ಲ,ಅವು ಪ್ರಕೃತಿಯನ್ನು ಗೌರವಿಸುತ್ತ ನಡೆಯುತ್ತವೆ. ನಾವು ಮಾತ್ರ ಅಹಂಕಾರಿಗಳು, ಅತೀ ಮಾನುಷರು! ಬದುಕಿ ಬದುಕಲು ಬಿಡಿ.

ಪ್ರಸಿದ್ಧ ನಟರೊಬ್ಬರು ಹಲವು ವರ್ಷಗಳ ಹಿಂದೆ ಹೇಳಿದ ಮಾತು "The world has become a giant megamall and the only thing they're selling is dissatisfaction. Make sure your neighbor doesn't get more."

ನಾವೆಲ್ಲ ಕರಗುವವರು, ಕೊರಗಿದಷ್ಟು ಬೇಗ. ಅದೆಷ್ಟುದಿನದ ಯೋಗ? ಅದಕ್ಕೇ, ದೇಶ ಕಟ್ಟಿ, ಮನೆಯನ್ನಲ್ಲ! 

Wednesday, January 2, 2019

✍ ಮೂರ್ಖನ ಮಾತುಗಳು !


ಕೆಲವೊಂದು ಪುಸ್ತಕಗಳು ಹಾಗೇ , ಓದಲಿಕ್ಕೆ ಕೂತರೆ ಸಾಕು ಓದಿ ಮುಗಿಸುವವರೆಗೆ ಹೊರ ಜಗತ್ತೆಲ್ಲ ನಗಣ್ಯ ! ಅದೊಂಥರದ ಧ್ಯಾನ. ನಿನ್ನೆ ಎಲ್ಲೋ ಬಂಧುಗಳ ಮನೆಗೆ ಹೋದಾಗ ತಗಲಾಕಿಕೊಂಡ ಪುಸ್ತಕ ಅದು. ಪುಸ್ತಕದ ಹೊನ್ನುಡಿ, ಮುನ್ನುಡಿ, ಬೆನ್ನುಡಿ ಎಲ್ಲ ಅದ್ಭುತವಾಗಿ ಬರೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು ಅದರ ಶೀರ್ಷಿಕೆ "ಮೂರ್ಖನ ಮಾತುಗಳು .. !". ಈಗೀಗ ಬುದ್ಧಿವಂತಿಕೆ ಜಾಸ್ತಿ ಆದವರೇ ತುಂಬಿ ಹೋಗಿರುವಾಗ ಇಂಥ ಶೀರ್ಷಿಕೆ ಬಹು ಸಮಂಜಸ! ಮೂರ್ಖನ ಮಾತೇಕೆ ನಾವು ಬುದ್ಧಿಜೀವಿಗಳು ಓದಬೇಕು, ಅಲ್ಲವಾ ! ಲೇಖಕರೇ ಹೇಳುವಂತೆ ಓದಲಿಕ್ಕೆ ಯೋಗ ಬೇಕು, ಹಾಗೆ ಬರೆಯಲಿಕ್ಕೂ ಕೂಡ.

ಎಲ್ಲ ಗಲಾಟೆ -ಗದ್ದಲಗಳ ನಡುವೆಯೇ, ಮಧ್ಯಾಹ್ನ ಓದಲಿಕ್ಕೆ ಕೈಗೆತ್ತಿಕೊಂಡ ಆ ಹೊತ್ತಿಗೆಯ ಗುಂಗು ಇಳಿದದ್ದು ರಾತ್ರಿ ೧೦ ಗಂಟೆಗೆ! ಹೊಸ ವರ್ಷದ ಮೊದಲ ದಿನವೇ ಒಂದು ಅದ್ಭುತವಾದ ಆಹಾರ ಮನಸ್ಸಿಗೆ ! ಭಯಂಕರ ಹಸಿದವನಿಗೆ ಸಿಕ್ಕಿದ್ದು ಗೀತಾಮೃತ! ಅದೆಷ್ಟು ಸುಲಭವಾಗಿ, ಹಿತವಾಗಿ ಬರವಣಿಗೆ ತೆರೆದುಕೊಳ್ಳುತ್ತದೆಯೋ ಮುಂದೆ ಹೋದಂತೆಲ್ಲ ಜೀವನದ ಒಂದೊಂದೇ ವಿಸ್ಮಯಗಳ್ಳನ್ನ ನಿಮ್ಮ ಮುಂದಿಡುತ್ತಾ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತ , ಒಮ್ಮೆ ನಗಿಸುತ್ತಾ, ಒಮ್ಮೊಮ್ಮೆ ಅಳಿಸುತ್ತಾ ಸಾಗುತ್ತದೆ. ಪುಸ್ತಕ ಓದಿ ಮುಗಿದಮೇಲೆ ಅನಿಸಿದ್ದಿಷ್ಟು , ಕಲಿತದ್ದೆಷ್ಟು , ಜೀವನದಲ್ಲಿ ಅಳವಡಿಸಿಕೊಂಡದ್ದೆಷ್ಟು, ಬಗೆದಷ್ಟೂ, ಬರೆದಷ್ಟೂ , ಬಾರದಿರುವುದಿನ್ನೆಷ್ಟು , ಒಟ್ಟಿನಲ್ಲಿ ಬೆಸ್ಟೊ ಬೆಸ್ಟು !ಬದುಕಿನ ಹೊಸ ಆಯಾಮವನ್ನೇ ತೆರೆದುಕೊಡುತ್ತದೆ ! ಸಾಧ್ಯವಾದರೆ ಕೊಂಡು ಓದಿ, "ಮೂರ್ಖನ ಮಾತುಗಳು!", ಬರೆದದ್ದು ಅಹೋರಾತ್ರ .

Monday, October 16, 2017

✍ ಅಪ್ಪ ಅಂದ್ರೆ ...

He is a born Engineer! ಹೌದು, ಆತನ ಬಗ್ಗೆ ತುಂಬ ಹೇಳಬೇಕಿದೆ. ತನ್ನ ಕಿರಿಯ ವಯಸ್ಸಿನಲ್ಲೇ ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಅವನೆದುರಿಗೆ ಇದ್ದದ್ದು ಬರೀ ಸವಾಲುಗಳೇ.
ಆತನ ಲೆಕ್ಕ ತುಂಬ perfect . ಇಂದಿಗೂ ಕೂಡ ಆತ ನನಗೆ ಅಚ್ಚರಿಯೇ. ಪದವಿ ಅಂತ ಒಂದು ಮಾಡಿದ್ದರೆ ಆತ ಈವತ್ತು ಯಾವ ಎತ್ತರಕ್ಕೆ ಹೋಗುತ್ತಿದ್ದನೋ, ನಿಜವಾಗಿಯೂ ನಾನರಿಯೆ.  ಈ ಕ್ಷಣದಲ್ಲೂ ನನಗೆ ನೋವುಂಟುಮಾಡುವ ಸತ್ಯ ಅದೊಂದೇ, ಆತನಿಗೆ ಕನಿಷ್ಠ ಒಂದು ಪದವಿಯನ್ನೂ ಓದಲಾಗಲಿಲ್ಲ.ನಂಗೊತ್ತು, He was helpless! ಆದರೆ ನನಗೆ ಮಾತ್ರ ಆತ, ಯಾವ ಪದವಿ ಮಾಡಿದ ದೊಡ್ಡ ಮನುಷ್ಯರಿಗಿಂತಲೂ ಮಿಗಿಲು. Am I living his dream?! ಗೊತ್ತಿಲ್ಲ.

ಸಂಬಂಧಗಳನ್ನ ಆತ ನಿಭಾಯಿಸುವ ರೀತಿ ನಾನಿನ್ನೂ ಕಲಿಯಬೇಕಿದೆ.ಅದೆಷ್ಟು ನಿಷ್ಠುರನೋ ಅಷ್ಟೇ ಆಪ್ತ ಕೂಡ. ಬಹುಷಃ ಮನೆಯ ಜವಾಬ್ದಾರಿಯ ನೊಗ ಹೊತ್ತಮೇಲಿಂದ ಆತ ಕಂಡಿದ್ದು ಬರೀ ಕಷ್ಟಗಳನ್ನೇ. 

ಅಪ್ಪ ಯಾವತ್ತೂ ತನ್ನ ಜವಾಬ್ದಾರಿಯಿಂದ ಜಾರಿಕೊಂಡವನಲ್ಲ.  ನನ್ನ ಶಾಲೆ ನನಗೆ ಶೈಕ್ಷಣಿಕ ವಿದ್ಯಾಭ್ಯಾಸ ಕೊಡುತ್ತಿದ್ದರೆ, ಅಪ್ಪ ನನಗೆ ಬದುಕಿನ ಸತ್ಯಗಳನ್ನ ಹೇಳಿಕೊಟ್ಟ. ಅದು ಕನಸು ಕಟ್ಟಿಕೊಳ್ಳುವ ವಯಸ್ಸು, ನನ್ನ ಟೀನೆಜಿನಲ್ಲಿ ಅಪ್ಪ ನನಗೆ ಕಟ್ಟಿಕೊಟ್ಟಿದ್ದು ಆತನ ಬದುಕಿನ ಅನುಭವಗಳನ್ನ. ಅವುಗಳನ್ನ ಬಿಚ್ಚಿ ಓದಿದರೆ ಬರೀ ನೋವು, ಅವಮಾನಗಳೇ. ಅಪ್ಪನದು ಹೋರಾಟದ ಬದುಕು.


ಆ ಹಳೆಯ ಮನೆಯ ಸೀಮೆ ಎಣ್ಣೆ ದೀಪ ನನಗಿನ್ನೂ ಬೆಳಕು ನೀಡುತ್ತಿದೆ. My Role model can not be anybody, but my Dad!


Friday, May 6, 2016

✍ ಮತ್ತೆ ಮಳೆ ಹುಯ್ಯುತಿದೆ…

ಜನವರಿಯ ನಂತರ ಬಿಸಿ ನೀರ ಜಳಕ ಹಿತವೆನಿಸಿದ್ದು ಈವತ್ತೇ! ಒಂಥರ “a complete day” ಅಂತನಿಸಿತು. ತುಂಬಾ ದಿನಗಳ ನಂತರ ಬಿಎಂಟಿಸಿಯಲ್ಲಿ ಪ್ರಯಾಣ, ಹಳೆಯ ಸೋಲು-ಅವಮಾನ ಮರೆಸುವಂಥ ಒಂದು ಚಂದನೆಯ ವೊಲಿಬಾಲ್ ಪಂದ್ಯಾವಳಿ ಗೆದ್ದ ಖುಷಿ,ಬೆವೆತು ಬೆಂದಿದ್ದ ಮೈ ಮನಸ್ಸಿಗೆ ತಂಪೆರೆದ ಮಳೆ, ದಾರಿಯಲ್ಲಿ ಒಂದು ಅದ್ಭುತ ಟೀ, ಮತ್ತೆ ಸಂಜೆ ಆಫೀಸ್ ಕ್ಯಾಬ್ ನಲ್ಲಿ ಮನೆಯ ಕಡೆ ಪಯಣ, ಹಾಡು ಹರಟೆ, ಮಳೆಯಲ್ಲಿ ಮನೆ ಸೇರಿಕೊಳ್ಳುವ ಧಾವಂತದ ನಡಿಗೆ, ಹಿತವೆನಿಸಿದ ಬಿಸಿ ನೀರ ಜಳಕ, ಒಂದು ಚಿಕ್ಕ ಬ್ಲಾಗ್ ಬರಹ!
Office “Summer Smash” volleyball 2016-Champions

ಈ ತರಹದ ಮಳೆ ಬಂದಾಗಲೆಲ್ಲ ಗೆಳೆಯ ಮಹೆಂದ್ರನ ತಣ್ಣನೆಯ ಅಣಕದ ಮೆಸೇಜ್ “ನೋಡ್ರಪ್ಪಾ ಮಳೆ ಬಂತು, ವಿವೇಕಂದು ಬ್ಲಾಗ್ ಪೋಸ್ಟ್ ಬತ್ತು ಈಗ”. ಏನ್ಮಾಡೊದು, ನಮಗೆ ಮೂಡ್ ಬರುವುದೇ ಮಳೆ ಬಂದಮೇಲೆ, ಬರೆಯಲಿಕ್ಕೆ! ಈ ಸಾರಿ ಯಾಕೋ ಹುಡುಗನ ಸುಳಿವಿಲ್ಲ. ಬಿಡಿ ಈಗ ತಾನೇ ಮದುವೆ ಆಗಿದ್ದಾನೆ, ಸಂಸಾರಿ ಪಾಪ! 😉

ಬದುಕಿರುವ ಪ್ರತೀ ದಿನವೂ ಹೀಗೇ ಇದ್ದರೆ ಎಷ್ಟು ಚಂದ ಅನಿಸುತ್ತದೆ. ದಿನವೂ ಹೊಸದು ಹೊಸತು. “Stagnation” ಅನ್ನುವ ಪದವೇ ನಮಗೊಂಥರ ಅಲರ್ಜಿ! ಈವತ್ತಿನ ಹಾಗೇ ನಾಳೆ ಇದ್ದರೆ ಏನು ಚಂದ?

ಇವತ್ತಿನಲ್ಲಿ ಬದುಕಿರಲಿ, ನಾಳೆಯಲ್ಲಿ ಹೂಸದಿರಲಿ….☺




Friday, October 9, 2015

✍ ‘ಬರ’ವಣಿಗೆ

ಬೆಳಿಗ್ಗೆ ಏಳು ಗಂಟೆಗೆಲ್ಲಾ ಆಫೀಸ್, ಸಂಜೆ ಬರುವಷ್ಟರಲ್ಲಿ ಮತ್ತದೇ ಏಳು ಗಂಟೆ.  ವಾರಾಂತ್ಯದಲ್ಲಿ ಸಾಕು ಸಾಕು ಅನ್ನುವಷ್ಟು ಆಟ,ತಿರುಗಾಟ,ಕೆಲಸ,ಟಿವಿ! ಅದ್ಯಾವಾಗ SunDay ಹೋಗಿ SunNight ಆಗುತ್ತೋ ಗೊತ್ತೇ ಆಗುವುದಿಲ್ಲ. ಒಟ್ಟಿನಲ್ಲಿ ಬರವಣಿಗೆಗೆ ಬರಗಾಲ.  ಒಮ್ಮೊಮ್ಮೆ ಕಾಲಿಗೆ ಚಕ್ರ ಕಟ್ಟಿಕೊಂಡು ಕಾಲಚಕ್ರದ ಜೊತೆ ತಿರುಗಾಟ, ಇನ್ನೊಮ್ಮೆ ಕಾಲೇ ಇಲ್ಲವೇನೋ ಎಂಬಂತೆ ಕೂತು ಕಂಪ್ಯೂಟರ್ ಕುಟ್ಟುವ ಕೆಲಸ. ಮೆಂಟಲ್ ಜಾಮ್! ನನ್ನ ‘Kindle’ ಪುಸ್ತಕ ಮಳಿಗೆಯಲ್ಲಿ ಕಿಂಡಲ್ ಮಾಡುತ್ತಾ ಕುಳಿತಿರುವ ಕೇಜಿ ಕೇಜಿ ಪುಸ್ತಕಗಳು, ಮೊನ್ನೆ ಎಲ್ಲೋ ಇಂಟರ್ನೆಟ್ನಲ್ಲಿ ಇಣುಕಿ ನೋಡುತ್ತಿದ್ದಾಗ ನನಗೆ ತುಂಬಾ ಇಷ್ಟವಾಗುವ ಬಿ.ವಿ.ಅನಂತರಾಮ್ ಅವರ ಕಾದಂಬರಿಗಳು ಸಿಕ್ಕು ಅವುಗಳನ್ನ ‘Kindle’ಗೆ ತುರುಕಿದ್ದಾಗಿದೆ. ‘ಜಿಂಕೆ’ಯ ಜೊತೆ ಓಡುವ-ಓದುವ  ಮಜವೇ ಬೆರೆ.
ಜಗತ್ತೆಲ್ಲ ಸ್ಮಾರ್ಟ್ ಆಗುತ್ತಿದೆ. ಕಯ್ಯಲ್ಲಿ ಮೊಬೈಲ್ ಗ್ಯಾಜೆಟ್ ಹಿಡಿದುಕೊಂಡು ಮಕ್ಕಳೆಲ್ಲ ಇಮ್ಮೊಬೈಲ್ ಆಗುತ್ತಿದ್ದಾರೆ. ಈ ಶೈಕ್ಷಣಿಕ ವ್ಯವಸ್ಥೆ, ಸೋಶಿಯಲ್ ಮೀಡಿಯಾ ಅವರಿಗೆ ವಿದ್ಯೆ, ವಿನಯವೊಂದನ್ನು ಬಿಟ್ಟು ಬೇರೆ ಎಲ್ಲಾ ಕಲಿಸಿಕೊಡುತ್ತಿದೆ. ಹಳ್ಳಿಯ ಮಕ್ಕಳಾದರೂ ಪರವಾಗಿಲ್ಲ ಸ್ವಾಮೀ, ಈ ಪೇಟೆಯ ಮಕ್ಕಳೆಲ್ಲ ಯಾವ ಪ್ರೈಮ್ಮಿನಿಸ್ಟರ್ ಗೂ ಕಡಿಮೆಯಿಲ್ಲದಂತೆ ಬ್ಯುಸಿ ಇರುತ್ತಾರೆ. ಅದೇನೋ ರೇಸಿಗೆ ಬಿದ್ದವರ ಹಾಗೆ.
‘ಕುಂಗ್ ಫು ಪಾಂಡ’ ದಲ್ಲಿ ‘ಇನ್ನರ್ ಪೀಸ್’ ಅಂತ ತೋರಿಸ್ತಾರಲ್ಲ ಅದು ಬರೀ ಗೊಂಬೆ ಆಟವಲ್ಲ. ಮನೆಯಲ್ಲಿ ಎಲ್ಲರೂ ನಿಂತೋ ಕುಳಿತೋ ಸಂಜೆ ಒಂದಾದಮೇಲೊಂದರಂತೆ ಧಾರಾವಾಹಿಗಳನ್ನೂ ಇಲ್ಲ ಯಾವುದೋ ತಂಗಳು ಸಿನಿಮಾವನ್ನೂ ನೋಡುತ್ತಿರುವಾಗ ಥಟ್ಟನೆ ಕರೆಂಟು ಹೋಗುತ್ತಲ್ಲ, ಅದು ಅದ್ಭುತವಾದ ಸಮಯ. ಮನುಷ್ಯರು ಮಾತಾಡುವುದೇ ಆವಾಗ! ಸೀರಿಯಲ್ ಸಂತೆಗಳಲ್ಲಿ ಕಳೆದು ಹೋಗಿ ಮೈ ಮನಸ್ಸುಗಳನ್ನ ಕೆಡಿಸಿಕೊಳ್ಳುವುದಕ್ಕಿಂತ ಸಂಜೆಯನ್ನ ಕಳೆಯಲಿಕ್ಕೆ ಚಂದನೆಯ ಆರೋಗ್ಯಕರವಾದ ಹವ್ಯಾಸವನ್ನ ಬೆಳೆಸಿಕೊಳ್ಳಿ .  ಇತ್ತೀಚೆಗಿನ ದೃಶ್ಯಮಾಧ್ಯಮಗಳಾವವೂ ನಮಗೆ ಸಕಾರಾತ್ಮಕವಾದ ಯೋಚನೆಗಳನ್ನಾಗಲೀ ಅಥವಾ ಬದುಕಿನ ಮೌಲ್ಯಗಳನ್ನ ಉತ್ತೇಜಿಸುವ ಗೋಜಿಗೆ ಹೋಗುತ್ತಿಲ್ಲ. ಅಲ್ಲಿ ಬರೀ ಆಡಂಬರ ಹಾಗೂ ಅಶ್ಲೀಲತೆ.ಮೊನ್ನೆ ಮುತ್ಯಾಲ ಮಡುವು ಅಂತ ಯಾವುದೋ ಟ್ರಿಪ್ ಗೆ ಹೋಗಿ ಬಂದದ್ದಾಯಿತು. ಯುವಜನತೆ ಅದ್ಯಾವ ಪರಿಗೆ ಹದಗೆಟ್ಟು ಹೋಗಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಂತಿತ್ತು ಅದು.  ಸಿಂಪ್ಲಿಸಿಟಿ ಹೋಗಿ ಕೊಂಪ್ಲಿಸಿಟಿ ಆಗುತ್ತಿದೆ, ಇನ್ನು ಸ್ಮಾರ್ಟ್ ಸಿಟಿ ಎಲ್ಲಿಂದ ಆಗಬೇಕು? ಅಲ್ಲಿ ಹಳ್ಳಿಗಳಲ್ಲಿ ರೈತರು ಸಾಯುತ್ತಿದ್ದರೆ ಇಲ್ಲಿ ನಗರಗಳನ್ನು ಉದ್ಧಾರ ಮಾಡುವ ಯೋಜನೆ ರೆಡಿ ಆಗುತ್ತಿದೆ.  ಅದ್ಹೇಗೆ ‘ನಂದಿನಿ’ ಅನ್ನುವ ಹಾಲಿನ ಒಕ್ಕೂಟ ಅಷ್ಟೊಂದು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ? ಅದ್ಯಾಕೆ ಅದೇ ರೀತಿಯಾದ ವ್ಯವಸ್ಥಿತವಾದ ಮಾರುಕಟ್ಟೆಯನ್ನ ಕೃಷಿ ಉತ್ಪನ್ನಗಳಿಗೆ ಒದಗಿಸಿಲ್ಲ? ರೈತ ದೇಶದ ಬೆನ್ನೆಲುಬು ಅಂದು ಅಂದು, ಆತನ ಸ್ಪೈನಲ್ ಕಾರ್ಡ್ ಅನ್ನೇ  ಕಿತ್ತುಹಾಕಲಾಗುತ್ತಿದೆ.

ಇದ್ದುದರಲಿ ಗೆಳೆಯ ಶ್ರೀಕೃಷ್ಣ ಮತ್ತವನ ತಂಡ ಒಂದು ಒಳ್ಳೆಯ ಆರಂಭ ಮಾಡಿದ್ದಾರೆ.  ConnectFarmer.com ಗೆ ಒಮ್ಮೆ ಭೇಟಿ ಕೊಡಿ. ಅವರ ಪ್ರಯತ್ನ ಯಶಸ್ವಿಯಾಗಲಿ.
ರಾಜಕಾರಣಿಗಳು ರಾಜಕೀಯ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನ ಕೊಡಬೆಕಿದೆ. ಕರ್ನಾಟಕವನ್ನ, ಭಾರತವನ್ನ ಗೆದ್ದಲು ಹುಳುಗಳಂತೆ ತಿಂದಿದ್ದು ಸಾಕು. ದೂರದೃಷ್ಟಿ ಇಲ್ಲದ ಯೋಜನೆಗಳು, ಸೂಕ್ಷ್ಮ ಸಂವೇದನೆ ಇರದ ನಾಯಕರುಗಳು, ಕೊಳತು ನಾರುತ್ತಿರುವ ಕಾನೂನುಗಳು ಎಲ್ಲ ಒಮ್ಮೆ ಕ್ಲೀನ್ ಆಗಬೆಕಿದೆ. ಭಾರತದಲ್ಲಿ ಸ್ವಾತಂತ್ರ್ಯ ಹೋಗಿ ಸ್ವೇಚ್ಚಾಚಾರ ಹೆಚ್ಚಾಗುತ್ತಿದೆ. ‘A good start is half done’ ಅಂತಾರಲ್ಲ, ನಮ್ಮ ಹಣೆಬರಕ್ಕೆ ಪ್ರಜಾಪ್ರಭುತ್ವದ ಆರಂಭವೇ ಸರಿಯಾಗಿರಲಿಲ್ಲ. ಕಡೆಯಪಕ್ಷ ಮೋದಿಯಾದರೂ ಮೋಡಿ ಮಾಡಬಲ್ಲರೇ ಅನ್ನುವ ಕುತೂಹಲಭರಿತ ಕಣ್ಣುಗಳೊಂದಿಗೆ …