Wednesday, January 2, 2019

✍ ಮೂರ್ಖನ ಮಾತುಗಳು !


ಕೆಲವೊಂದು ಪುಸ್ತಕಗಳು ಹಾಗೇ , ಓದಲಿಕ್ಕೆ ಕೂತರೆ ಸಾಕು ಓದಿ ಮುಗಿಸುವವರೆಗೆ ಹೊರ ಜಗತ್ತೆಲ್ಲ ನಗಣ್ಯ ! ಅದೊಂಥರದ ಧ್ಯಾನ. ನಿನ್ನೆ ಎಲ್ಲೋ ಬಂಧುಗಳ ಮನೆಗೆ ಹೋದಾಗ ತಗಲಾಕಿಕೊಂಡ ಪುಸ್ತಕ ಅದು. ಪುಸ್ತಕದ ಹೊನ್ನುಡಿ, ಮುನ್ನುಡಿ, ಬೆನ್ನುಡಿ ಎಲ್ಲ ಅದ್ಭುತವಾಗಿ ಬರೆದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು ಅದರ ಶೀರ್ಷಿಕೆ "ಮೂರ್ಖನ ಮಾತುಗಳು .. !". ಈಗೀಗ ಬುದ್ಧಿವಂತಿಕೆ ಜಾಸ್ತಿ ಆದವರೇ ತುಂಬಿ ಹೋಗಿರುವಾಗ ಇಂಥ ಶೀರ್ಷಿಕೆ ಬಹು ಸಮಂಜಸ! ಮೂರ್ಖನ ಮಾತೇಕೆ ನಾವು ಬುದ್ಧಿಜೀವಿಗಳು ಓದಬೇಕು, ಅಲ್ಲವಾ ! ಲೇಖಕರೇ ಹೇಳುವಂತೆ ಓದಲಿಕ್ಕೆ ಯೋಗ ಬೇಕು, ಹಾಗೆ ಬರೆಯಲಿಕ್ಕೂ ಕೂಡ.

ಎಲ್ಲ ಗಲಾಟೆ -ಗದ್ದಲಗಳ ನಡುವೆಯೇ, ಮಧ್ಯಾಹ್ನ ಓದಲಿಕ್ಕೆ ಕೈಗೆತ್ತಿಕೊಂಡ ಆ ಹೊತ್ತಿಗೆಯ ಗುಂಗು ಇಳಿದದ್ದು ರಾತ್ರಿ ೧೦ ಗಂಟೆಗೆ! ಹೊಸ ವರ್ಷದ ಮೊದಲ ದಿನವೇ ಒಂದು ಅದ್ಭುತವಾದ ಆಹಾರ ಮನಸ್ಸಿಗೆ ! ಭಯಂಕರ ಹಸಿದವನಿಗೆ ಸಿಕ್ಕಿದ್ದು ಗೀತಾಮೃತ! ಅದೆಷ್ಟು ಸುಲಭವಾಗಿ, ಹಿತವಾಗಿ ಬರವಣಿಗೆ ತೆರೆದುಕೊಳ್ಳುತ್ತದೆಯೋ ಮುಂದೆ ಹೋದಂತೆಲ್ಲ ಜೀವನದ ಒಂದೊಂದೇ ವಿಸ್ಮಯಗಳ್ಳನ್ನ ನಿಮ್ಮ ಮುಂದಿಡುತ್ತಾ ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತ , ಒಮ್ಮೆ ನಗಿಸುತ್ತಾ, ಒಮ್ಮೊಮ್ಮೆ ಅಳಿಸುತ್ತಾ ಸಾಗುತ್ತದೆ. ಪುಸ್ತಕ ಓದಿ ಮುಗಿದಮೇಲೆ ಅನಿಸಿದ್ದಿಷ್ಟು , ಕಲಿತದ್ದೆಷ್ಟು , ಜೀವನದಲ್ಲಿ ಅಳವಡಿಸಿಕೊಂಡದ್ದೆಷ್ಟು, ಬಗೆದಷ್ಟೂ, ಬರೆದಷ್ಟೂ , ಬಾರದಿರುವುದಿನ್ನೆಷ್ಟು , ಒಟ್ಟಿನಲ್ಲಿ ಬೆಸ್ಟೊ ಬೆಸ್ಟು !ಬದುಕಿನ ಹೊಸ ಆಯಾಮವನ್ನೇ ತೆರೆದುಕೊಡುತ್ತದೆ ! ಸಾಧ್ಯವಾದರೆ ಕೊಂಡು ಓದಿ, "ಮೂರ್ಖನ ಮಾತುಗಳು!", ಬರೆದದ್ದು ಅಹೋರಾತ್ರ .

No comments:

Post a Comment