December 25, 2010

ವರ್ಷದ ಮುಪ್ಪು, ಜನವರಿಗೆ ನೆನಪು!

   ನನ್ನ ಡೈರಿಯ ಪುಟಗಳಲ್ಲಿ ಅರ್ಧ ಗೀಚಿ ಬಿಟ್ಟ ಸಾಲುಗಳು ಅವೆಷ್ಟೋ! ಏನೋ ಹೇಳಬೇಕು ಅಂದುಕೊಳ್ಳುತ್ತೇನೆ, ಆದರೆ ಪೆನ್ನು ಹಟಕ್ಕೆ ಬಿದ್ದವನಂತೆ ನಿಂತು ಬಿಡುತ್ತೆ . ಜಪ್ಪಯ್ಯ ಅಂದರೂ ಮುಂದೆ ಸರಿಯುವುದಿಲ್ಲ. Simply stuck! ಹಾಗೆ ನಿಂತ ಸಾಲುಗಳನ್ನ ಮತ್ತೆ ಶುರು ಮಾಡುವುದು ಇನ್ಯಾವತ್ತೋ ಒಂದು ದಿನ. ಕಾರಣ ಇಷ್ಟೇ, ಏನು ಹೇಳಬೇಕು ಅಂತ ಅಂದುಕೊಂಡಿರುತ್ತೇನೋ ಅದರ ಸರಿಯಾದ ಚಿತ್ರಣ ನನ್ನಲ್ಲಿನ್ನೂ ಮೂಡಿರುವುದಿಲ್ಲ. ತಲೆಯಲ್ಲಿ ಏನೇನೋ ಅರ್ಧಂಬರ್ಧ ಲೋಡ್ ಆಗಿರುತ್ತೆ . ಅದನ್ನ  ಮತ್ತೆ ಯಾವತ್ತೋ ಒಮ್ಮೆ ಮೇಲುಕುಹಾಕಿ ಒಂದು ಸ್ಪಷ್ಟ ಚಿತ್ರ ಮೂಡಿದಮೇಲೆ ಮತ್ತೆ ಶುರುವಿಟ್ಟುಕೊಳ್ಳುವುದು .

ನೀವದೆಷ್ಟು ಜನ ಇವನ್ನೆಲ್ಲ ಕೂತು ಕಷ್ಟಪಟ್ಟು-ಇಷ್ಟಪಟ್ಟು ಓದುತ್ತೀರೋ ನಾಕಾಣೆ, ಬ್ಲಾಗ್ ಪೋಸ್ಟ್ ಗಳನ್ನ ಓದಲಿಕ್ಕೆ ನಿಜವಾಗಲೂ ತುಂಬ ತಾಳ್ಮೆ ಬೇಕು, ಇಲ್ಲವೋ ಆ ಬರವಣಿಗೆ ನಿಮ್ಮನ್ನ ಓದಿಸಿಕೊಂಡು ಸಾಗಬೇಕು. ತುಂಬ ಕಷ್ಟ (ನೀವು ಇದನ್ನೆಲ್ಲಾ ಓದುತ್ತಿದ್ದರೆ, ನಿಮಗೆ ಸಿಕ್ಕಾಪಟ್ಟೆ ಥ್ಯಾಂಕ್ಸ್ !)

ಇವೆಲ್ಲ ಕತೆ ಪುರಾಣಗಳೇನೇ  ಇರಲಿ, ನೀವು ಮಾತ್ರ ಲೈಫ್ ನಲ್ಲಿ ಏನೇ ಆದರೂ, ಯಾರು ಏನೇ ಅಂದರೂ ತಲೆ ಕೆಡಿಸಿಕೊಳ್ಳಬೇಡಿ, ಹಾಗೆ ತಲೆ ಕೆಡಿಸುವವರ ತಲೆ ತಿನ್ನೋದನ್ನ ಯಾವುದೇ ಕಾರಣಕ್ಕೂ ಮರೆಯಬೇಡಿ! Still ,  ಯಾರೂ ಏನನ್ನೂ  ಅನ್ನದಿರೋ ಹಾಗೆ ನಿಮ್ಮ ಜಿಂದಗಿ ಇರಲಿ!

ನಿಮಗೆ ಹಾಗೂ ನಿಮ್ಮ ಮನೆಯವರಿಗೆಲ್ಲ,  ಕ್ರಿಸ್ಮಸ್ ನ, ಹೊಸವರ್ಷದ, ಸಂಕ್ರಾಂತಿ ಹಬ್ಬದ ಅಡ್ವಾನ್ಸ್ ಬಂಪರ್ ಶುಭಾಷಯಗಳು.
 November 3, 2010

ಜಿಂದಗಿ...ತುಂಬ ಒಂಟಿ

ದುಕು ಯಾಕಿಷ್ಟು ಒಂಟಿ? ಎದೆಯೊಳಗೆ ಕನಸುಗಳದೇ ಕಾರುಬಾರು. ಲೈಫು ಅದ್ಯಾವಾಗ ಟ್ರ್ಯಾಕಿಗೆ ಬರುತ್ತದೋ ದೇವರೇ ಬಲ್ಲ. ಈ ಅಕ್ಟೋಬರ್- ನವೆಂಬರ್ ಇವೆಯಲ್ಲ, ನನಗೆ ತುಂಬ ಆಪ್ತವಾಗುವ ತಿಂಗಳುಗಳಿವು. ಆ ಕಡೆ ಮಳೆಗಾಲದ ಮುಪ್ಪನ್ನೂ, ಈ ಕಡೆ ಚಳಿಗಾಲದ ಹುಟ್ಟನ್ನೂ ಒಡಲಲ್ಲಿ ಕಟ್ಟಿಕೊಂಡು, ಅವೆರಡರ ಅನುಭವವನ್ನ ಒಟ್ಟಿಗೇ ನೀಡುವ ಹುಚ್ಚರು. ಈ ಸಮಯದಲ್ಲಿ ಪ್ರಕೃತಿಯ ಅಂದ ಸವಿದವನಿಗೆ ಗೊತ್ತು ಅದರ ಆನಂದ. ತುಂಬ ಅಂದರೆ ತುಂಬ ಇಷ್ಟವಾಗುವ ಕಾಲವದು. ಅದಕ್ಕೆ ಯಾವತ್ತೂ ಅವು ನನ್ನನ್ನ ನಮ್ಮೂರ ಹೆಬ್ಬಾಗಿಲಿಗೆ ತಂದು ನಿಲ್ಲಿಸುತ್ತವೆ. ನೆನಪುಗಳ ಮಹಾಪೂರ. ಅವತ್ತು ದತ್ತಪ್ಪಚ್ಚಿ, ಅಕ್ಷಯ, ಸಚಿನ್, ಸುಚಿ, ರೇಖಾ ಮತ್ತೆ ನಾನು, ಮನೆಗೆ ಹತ್ತಿರವೇ ಇರುವ ಸಹಸ್ರಲಿಂಗಕ್ಕೆ ಹಾಗೆ ಸುಮ್ಮನೇ ನಡೆದು ಹೊರಟ್ಟಿದ್ದೆವು. ಅಲ್ಲಿಗೆ ನಡೆದು ಹೋಗುವುದೇ ಒಂದು ಹಬ್ಬ. ಅಲ್ಲಿ ಸಿಗುವ ಆನಂದ ಮನ:ಶಾಂತಿ ವರ್ಣಿಸಲು ನನ್ನಲ್ಲಿ ಪದಗಳ ಕೊರತೆ ಇದೆ, ಹುಡುಕುವ ದುಸ್ಸಾಹಸ ಇನ್ನೂ ಮಾಡಿಲ್ಲ. ಮಿಥುನ್ ಅವತ್ತು ನಮ್ಮೂರಿಗೆ ಬಂದಾಗ ಅಂದಿದ್ದ "ಎಂಥ ಡ್ರಾಸ್ಟಿಕ್ ಚೇಂಜ್ ಆಲ್ವಾ ಮಗಾ, ನಿಮ್ಮೂರಿಗೆ ಬಂದ ತಕ್ಷಣ " ಅಂತ. Exactly ! ದತ್ತಪ್ಪಚ್ಚಿಯ ಮಂಗಾಟ ಹಾಗೂ ಸಹಸ್ರಲಿಂಗದ ಕೆಲವು ಫೋಟೋ ಇಲ್ಲಿವೆ, ನೋಡಿಕೊಳ್ಳಿ.

October 19, 2010

ರೈಲು ಬೋಗಿ....

   ಅದು ಮೊದಲ ರೈಲು ಪ್ರಯಾಣ. ಅವತ್ತು ಹಾಗೆ ರೈಲಿನಲ್ಲಿ ಹೊರಟಿದ್ದು ಮಹೇಂದ್ರ, ಮಂಜು, ಸೈನ್ ೩೦ ( ಕಾಲೇಜಿನಲ್ಲಿ ಅವನಿಗಿಟ್ಟಿದ್ದ ನಿಕ್ ನೇಮದು, ಅಸಲಿ ಹೆಸರು ಮಹೇಂದ್ರ) ಮತ್ತೆ ನಾನು. ಅದು ರಾತ್ರಿ ಪ್ರಯಾಣ, ಮಲಗಿದ್ದು ನೆನಪಿಲ್ಲ, ಬರೀ ಮಾತು ಮಾತು ಮಾತು. ಅದ್ಭುತವಾಗಿತ್ತು . ಅದೆಷ್ಟು ಜನ ಹುಡುಗಿಯರು ಮಾತಿನ ಮಧ್ಯ ಬಂದು ಕಾಡಿ ಹೋದರೋ ಗೊತ್ತಿಲ್ಲ!
 ಎರಡನೇ ಬಾರಿ ಒಬ್ಬನೇ ಹೋಗಿದ್ದೆ. ಹಾವೇರಿಯಲ್ಲಿ ರೈಲಿಳಿದಾಗ ಪ್ರವೀಣ ಸಿಕ್ಕಿದ್ದ, ತುಂಬ ವರುಷವಾದಮೇಲೆ. ಅದೇ ವ್ಯಕ್ತಿತ್ವ, ತುಂಬ ಸಿಂಪಲ್, ಮಾತಲ್ಲಿ ಅದೇ ಆತ್ಮೀಯತೆ, ಖುಷಿಯಾಯಿತು, ಆಮೇಲೆ ಶಿರಸಿಯವರೆಗೆ ಒಟ್ಟಿಗೆ ಪ್ರಯಾಣ.


ಮೂರನೇ ಬಾರಿ ಹೋದಾಗ ಮಾತ್ರ ರೈಲು ಪ್ರಯಾಣ ಅಂದರೆ ಸ್ವಲ್ಪ ಹೆದರಿಕೆಯಾಗಿದ್ದು ನಿಜ. ಆಗ ನಾನು ಮಂಜು ಇಬ್ಬರೇ ಹೋಗಿದ್ದು. ನಾವು ಕೂತಿದ್ದ ಸೀಟಿನ ಎದುರಿನ ಸೀಟಲ್ಲೇ ಇಬ್ಬರು ಅನಾಮಿಕರು ಕೂತು ಏನೋ ಪಿಸುಗುಡುತ್ತಿದ್ದದ್ದು ಕಾಣಿಸಿತು.ಮಹಾರಾಷ್ಟ್ರಕ್ಕೆ ಹೋಗುವವರು ಅಂತಂದ ನೆನಪು . ತುಮಕೂರು ದಾಟಿರಬಹುದು ರೈಲು, ತಲೆ ಎತ್ತಿ ನೋಡಿದರೆ ಅವರಲ್ಲೊಬ್ಬ ನಮ್ಮನ್ನೇ ಗುರಾಯಿಸುತ್ತಿದ್ದ.ಮಂಜುಗೆ ಹೇಳಿದೆ. ಅವನು ಮೊದಲಬಾರಿ ಅಷ್ಟು ತಲೆಕೆಡಿಸಿಕೊಳ್ಳಲಿಲ್ಲ . ಆಮೇಲೆ ಅವನಿಗೂ ಸ್ವಲ್ಪ ಭಯ ಶುರುವಾಯಿತು. ನಾನು ಹಾವೇರಿಯಲ್ಲಿ ಹಾರಿಕೊಳ್ಳುವವನಾಗಿದ್ದರಿಂದ ಅವನಿಗಿನ್ನಷ್ಟು ಕಳವಳ ಜಾಸ್ತಿ ಆದಂತಿತ್ತು.

ಅದನ್ನೇ ನನ್ನ ಕಿವಿಯಲ್ಲಿ ಪಿಸುಗುಟ್ಟತೊಡಗಿದ  . ಸ್ವಲ್ಪ ಹೊತ್ತಿನ ನಂತರ ನಮ್ಮಿಬ್ಬರ ಜೊತೆ ಮಾತಿಗಿಳಿದರವರು . ಮಧ್ಯ ಮದ್ಯ ಮರಾಠಿಯಲ್ಲಿ ಏನೇನೋ ಲೋಚಗುಡುತ್ತಿದ್ದರು. ನಮಗಿಬ್ಬರಿಗೋ, ಕುತೂಹಲದ ಜೊತೆ  ಭಯ,  ಮರಾಠಿ ಅರ್ಥವಾಗುತ್ತಿರಲಿಲ್ಲ (ಈಗಲೂ ಅರ್ಥವಾಗುವುದಿಲ್ಲ !). ಆಮೇಲೆ ಅವರಲ್ಲೊಬ್ಬ ನನ್ನ ಕೈ ಹಿಡಿದುಕೊಂಡು ಹಸ್ತದ ಮೇಲಿದ್ದ ರೆಖೆಗಳಮೇಲೆಲ್ಲ ಕಣ್ಣು ಹಾಯಿಸತೊಡಗಿದ . ಎಲ್ಲ ರೇಖೆಗಳ ಜಾತಕ ನೋಡಿದ ಮೇಲೆ ಅವನು ಹೇಳಿದ್ದಿಷ್ಟು "ಹುಡುಗ ಒಳ್ಳೆ  ಕಾರ್ಪೋರೆಟ್ ಆಗುತ್ತಾನೆ  "! ಆದರೆ ಅವತ್ತು ಅಲ್ಲಾದಷ್ಟು ಸಂತೋಷ ಇವತ್ತು ಇಲ್ಲಿಲ್ಲ.


ಮತ್ತೆ ರೈಲು ಏರಿದ್ದು ವಿನುತ್  ಜೊತೆ.  ಅವತ್ತು ಮಾತ್ರ ಇಬ್ಬರಿಗೂ ತಲೆ ಕೆಟ್ಟುಹೋಗಿತ್ತು. ಸುದೀರ್ಘ ರೈಲು ಪ್ರಯಾಣ. ವಿನುತ್ ಅರ್ಧ ದಾರಿಯಲ್ಲೇ ಇಳಿದುಕೊಂಡುಬಿಟ್ಟ . ಆಮೇಲಂತೂ ಒಂಟಿ, ಅದೂ ಹಗಲು ಪ್ರಯಾಣ . ಸ್ವಲ್ಪ ಹೊತ್ತು ಕಿಟಕಿಯ ಹೊರಗೆ ಕಣ್ಣು ಹಾಯಿಸುತ್ತ ಕುಳಿತೆ. ಆ ಪರಿಸರ , ಹಸಿರು - ಬೆಟ್ಟಗುಡ್ಡಗಳು ಇವು ಯಾವವೂ ನನಗೆ ಹೊಸದಲ್ಲವಾದ ಕಾರಣವೋ ಏನೋ, ಬೇಗ ಅವೆಲ್ಲ ಬೋರಾಗಿಬಿಟ್ಟವು   . ಆಮೇಲೆ ನನ್ನ ಕೆಲವು ಫ್ರೆಂಡ್ಸ್ ಗಳಿಗೆಲ್ಲ ಮೆಸೇಜ್ ಒತ್ತತೊಡಗಿದೆ. ರೈಲಿನ ವೇಗ ನನ್ನ ತಲೆ ಕೆಡಿಸುತ್ತಿತ್ತು ನಾನು ಅವರೆಲ್ಲರ ತಲೆ ತಿನ್ನತೊಡಗಿದೆ . ಅವತ್ತು ಬೆಳಿಗ್ಗೆ ಹಾಗೇ 7.45 ಕ್ಕೆ ಬೆಂಗಳೂರಿನಿಂದ ಹೊರಟ ಪಾಪಿ ರೈಲು ನನ್ನನ್ನ ಹಾವೇರಿಗೆ ತಲುಪಿಸಿದ್ದು ಸಂಜೆ ಏಳಕ್ಕೆ . ಅವತ್ತು ನಾನು ಸೀದಾ ಶಿರಸಿಯಲ್ಲಿದ್ದ ನನ್ನ ದೊಡ್ಡಮ್ಮನ ಮನೆ ಸೇರಿದ್ದೆ , ರಾತ್ರಿ ಕಣ್ಣುಮುಚ್ಚಿದರೆ ತಲೆ ಒಳಗೆಲ್ಲ ಅದೇ ಟ್ರೈನ್ ಓಡಾಡುತ್ತಿತ್ತು ...


September 30, 2010

ಅದೇ ದಾರಿ....

ಪೆನ್ನಿನ ಬಾಯಿ ತೆಗೆದು ಹೀಗೆ ಬಿಳಿ ಹಾಳೆಯ ಮೇಲೆ ಗೀಚಿ ತುಂಬ ದಿನ ಆಗಿ ಹೋಗಿದೆ. ಹೊರಗಡೆ ಮಳೆರಾಯನ ತಣ್ಣನೆಯ ಸದ್ದು, ಕರೆಂಟ್ ಇಲ್ಲ, ಸಂಜೆಯ ಮಬ್ಬು, ನಾನಿರುವ ಚಿಕ್ಕ ಮನೆಯ ಒಳಗೆ ಸಣ್ಣಗೆ ಅರ್ಧ ಉರಿದು ಬೆಳಗುತ್ತಿರುವ ಎರಡು ಹಸಿರು ಮೇಣದಬತ್ತಿಗಳು...
ಕತ್ತಲಾಗುವವರೆಗೆಹೈಸ್ಕೂಲ್ನ ಕೆಂಪು ಮಣ್ಣಿನ ಮೈದಾನದಲ್ಲಿ ವಾಲಿಬಾಲ್ ಆಡಿ ಮನೆಗೆ ಹಿಂತಿರುಗುತ್ತಿದ್ದೀನೇನೋ ಅನ್ನಿಸುತ್ತಿದೆ..ಅದೇ ನೆನಪು...
ಹೈಸ್ಕೂಲ್ ನೆನಪು ಯಾವಾಗಲೂ ತುಂಬ ಖುಷಿ ಕೊಡುತ್ತೆ. ಶಾಸ್ತ್ರಿ ಮಾಸ್ತರ್ ಅವರ 'ಶಾಯೀ pen' ರೂಲು, ಅವರು ಬಳಸುತ್ತಿದ್ದ ಸಣ್ಣ ಏರಿಯಲ್ ಪಾಯಿಂಟರ್, ಮಾರ್ಕಾoಡೆ ಅಕ್ಕೋರ ಸೈನ್ಸ್ ಹಾಲ್ ಕ್ಲಾಸ್, ಸಹದೇವಪ್ಪನವರ ಸೀಟಿ, ನಾಗವೇಣಿ ಅಕ್ಕೋರ ಸಂಸ್ಕೃತ ಶ್ಲೋಕ- ಅವರು ಧಾಟಿ ಮಾಡಿ ಹೇಳುತ್ತಿದ್ದ ಆ ವರಸೆ, ಆರ್.ಎಸ್. ಹೆಗಡೆ ಅವರ unique ಸ್ಟೈಲ್, ಅವರ ಚಿತ್ರ ವಿಚಿತ್ರ ಜೋಕುಗಳು, ಒಮ್ಮೊಮ್ಮೆ ಭಯ ಹುಟ್ಟಿಸುವ ಅವರ ಗಂಭೀರ ವ್ಯಕ್ತಿತ್ವ ....ಇನ್ನೂ ಇನ್ನಷ್ಟೂ..ಎಲ್ಲ ಇನ್ನೂ ಹಾಗೆ ಜೀವಂತವಾಗಿ ಮನಸ್ಸಿನಲ್ಲಿವೆ. ನಾನು ನಿಜವಾಗಲೂ ಮಿಸ್ ಮಾಡಿಕೊಂಡಿದ್ದು ಕೆ.ಜಿ. ಹೆಗಡೆ ಅವರನ್ನ. ಕ್ರಾಫ್ಟ್, ಹಿಸ್ಟರಿ, ಡ್ರಾಯಿಂಗ್ ಕ್ಲಾಸ್ ಟೀಚರ್ ಆಗಿದ್ದವರು ಅವರು. ಕ್ರಾಫ್ಟ್ ಪಿರಿಯಡ್ ನಲ್ಲಿ ಹೈಸ್ಕೂಲ್ ತೋಟಕ್ಕೆ ನುಗ್ಗಿದರೆ ಹಬ್ಬವೋ ಹಬ್ಬ. ಅಲ್ಲಿನ ಪೇರಳೆ- ಮಾವಿನ ಮರಗಳು ಇಂದಿಗೂ ಪರಿಚಿತರೆ! ನಾಗರಕೂರದ ಒಳದಾರಿ, ಕ್ಲಾಸ್ಗಳೆಲ್ಲ ಮುಗಿದಮೇಲೆ ಆಡುತ್ತಿದ್ದ ಕ್ರಿಕೆಟ್-ವಾಲಿಬಾಲ್, ಕತ್ತಲಾಗುವವರೆಗೆ ಅಲ್ಲೇ ವಿನಾಯಕ ಮಾಸ್ತರ ಜೊತೆ ಹರಟೆ. ಆಮೇಲೆ ಮನೆಗೆ ಒಬ್ಬನೇ ನಡೆದು ಹೋಗುತ್ತಿದ್ದರೆ ಸಿಗುತ್ತಿದ್ದ ಆ ಆನಂದ- ಬೇಗ ಮನೆ ಸೇರಬೇಕೆಂಬ ಅಲ್ಲಿದ್ದ ಚಿಕ್ಕ ಧಾವಂತ, ಎಲ್ಲವೂ ಹಾಗೇ ಕಣ್ಣಮುಂದೆ ಒಮ್ಮೆ ಬಂದು ಹೋಗುತ್ತಿವೆ....
Bhairumbe HighSchool

April 17, 2010

ಮನಸಲ್ಲೆಲ್ಲ ಮಳೆಗಾಲ !ಅವತ್ತು ಧೋ ಎಂದು ಮಳೆ ಸುಮ್ಮನೆ ಸುರಿಯುತ್ತಿದ್ದರೆ ಮನಸ್ಸು ಹುಚ್ಚೆದ್ದು ಕುಣಿಯುತ್ತಿತ್ತು..ಏನೋ ಕಳಕೊಂಡ ನೋವು, ಮತ್ತಿನ್ನೇನೋ ಸಿಕ್ಕ ಖುಷಿ..ಈವತ್ತು ಹೀಗೆ  ಅತ್ಯಂತ ಪ್ರಶಾಂತವಾಗಿ  ತಣ್ಣಗೆ ಕುಳಿತಿದ್ದರೆ ಮನಸಲ್ಲೆಲ್ಲ ಮಳೆಗಾಲ! ಮನಸ್ಸಿನಲ್ಲಿ ಮೂಡುತ್ತಿರುವ ಚಿತ್ರಗಳಿಗೆ ಮೆತ್ತಲು ಬಣ್ಣಗಳೇ ಸಿಗುತ್ತಿಲ್ಲ.. ವೆಂಕಟೇಶ್ ಮೂರ್ತಿ ಅವರ ಈ ಅದ್ಭುತವಾದ ಸಾಲುಗಳು ಹಾಗೇ  ಮನಸ್ಸಿನಲ್ಲಿ ಒಮ್ಮೆ ಹಾದು ಹೋಗುತ್ತಿವೆ...


ಇರುಳ  ವಿರುದ್ಧ  ಬೆಳಕಿನ  ಯುದ್ಧ  ಕೊನೆಯಿಲ್ಲದ  ಕಾದಾಟ  

ತಡೆಯೇ  ಇಲ್ಲದೆ  ನಡೆಯಲೇ  ಬೇಕು  ಸೋಲಿಲ್ಲದ  ಹೋರಾಟ ..
ಮಣ್ಣ ತಿಂದು  ಸಿಹಿ  ಹಣ್ಣ  ಕೊಡುವ  ಮರ  ನೀಡಿ  ನೀಡಿ  ಮುಕ್ತ
ಬೇವ  ಆಗಿವ  ಸವಿಗಾನದ  ಹಕ್ಕಿ  ಹಾಡಿ  ಮುಕ್ತ  ಮುಕ್ತ ..
ಹಸಿರ  ತೋಳಿನಲಿ  ಬೆಂಕಿಯ  ಕೂಸ  ಪೊರೆವುದು  ತಾಯಿಯ  ಹೃದಯ 
ಮರೆಯುವುದುoಟೆ   ಮರೆಯಲಿನಿಂತ  ಕಾಯುವ  ಕರುಣಾಮಯಿಯ..
ತನ್ನಾವರಣವೇ ಸೆರೆಮನೆಯಾದರೆ ಜೀವಕೆ  ಎಲ್ಲಿಯ  ಮುಕ್ತಿ 
ಬೆಳಕಿನ  ಬಟ್ಟೆಯ  ಬಿಚ್ಚುವ  ಜ್ಯೋತಿಗೆ  ಬಯಲೇ  ಜೀವನ್ಮುಕ್ತಿ ..
ಇರುಳ  ವಿರುದ್ಧ  ಬೆಳಕಿನ  ಯುದ್ಧ  ಕೊನೆಯಿಲ್ಲದ  ಕಾದಾಟ  
ತಡೆಯೇ  ಇಲ್ಲದೆ  ನಡೆಯಲೇ  ಬೇಕು  ಸೋಲಿಲ್ಲದ  ಹೋರಾಟ ..
April 10, 2010

ಮನ್ವಂತರದ ನಿರೀಕ್ಷೆ!

          ದುಕನ್ನ ಚಂದಗೆ ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ತಲೆ ತುಂಬ ಓಡಾಡುವ ಲೆಕ್ಕವಿಲ್ಲದಷ್ಟು ಯೋಜನೆಗಳು-ಯೋಚನೆಗಳು, ಎಲ್ಲೋ ಮೂಲೆಯಿಂದ ಆಗಾಗ ಇಣುಕಿ ನೋಡುವ ಸಣ್ಣದೊಂದು ಬೆಳಕು, a light of hope! ಎಲ್ಲೋ ಒಂದು ಕಡೆ ಏನೋ ಒಂಥರದ ಅಸಮಾಧಾನ..

ಹೀಗೆ ಎಲ್ಲ ಅಸ್ಪಷ್ಟ. ಶಾಸ್ತ್ರಿಗಳು ಆಗಾಗ ಹೇಳುತ್ತಿರುತ್ತಾರೆ " ಬೆಂಗಳೂರು ಅಸಹ್ಯ ಕಣೋ, ಅದು ಜೀವನಕ್ಕೆ ಬೇಕಾಗುವ ಯಾವ ಸರಕನ್ನೂ-ಸಂತೋಷವನ್ನೂ ನೀಡಲಾರದು.ಅಲ್ಲಿ ಕೇವಲ ಬದುಕಲಾಗುತ್ತೆ, just like an animal!"
               ನಿಜ, ಇಲ್ಲದಿದ್ದರೆ ಹೀಗೆ ಮಧ್ಯರಾತ್ರಿಯಲ್ಲಿ ಧಿಡೀರನೆ ಎದ್ದು ಕೂತು ಬರೆಯುತ್ತಿರಲಿಲ್ಲವನೋ. ಇಲ್ಲಿರುವುದು ಬರೀ ಗೊಂದಲ ಅಥವಾ ನಾನಿರುವುದು ಗೊಂದಲದಲ್ಲಿ..ಹೀಗೂ ಅಂದುಕೊಳ್ಳಬಹುದು.
              ಈ ಪರಮ ದರಿದ್ರ, most irritating, ಏರಿಯಾದಲ್ಲಿ ಕಾಲೇಜು ಮುಗಿದಮೇಲೂ ಇರಬೇಕಾಗಿರುವುದು ನನ್ನ ಅದೃಷ್ಟವೋ ದುರಾದೃಷ್ಟವೋ ಗೊತ್ತಾಗುತ್ತಿಲ್ಲ. ಬೆಂಗಳೂರಿನಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದಿದ್ದು ಬರೀ ಅವಘಡಗಳೇ. ಕೆಲವರು ಇದ್ದೂ ಇಲ್ಲವಾದರೂ, ಇನ್ನಿಬ್ಬರು ಕೊನೆಯಬಾರಿಯೇನೋ ಎಂಬಂತೆ ನಕ್ಕು- ಅಳಿಸಿ-ಬರೀ ನೆನಪುಳಿಸಿ ಎದ್ದು ನಡೆದುಬಿಟ್ಟರು. ತುಂಬ ಒಂಟಿ ಅನಿಸಲಿಕ್ಕೆ ಶುರುವಾಗಿದ್ದೆ ಅವಾಗ. ಆಮೆಲೇ ಶಾಸ್ತ್ರಿಗಳು ದಾರಿಯಲ್ಲಿ ಜೊತೆ ನಡೆದು ಬಂದಿದ್ದು. ಆ ಹಿರಿಯ ಜೀವ ಜೊತೆ ಇದ್ದರೆ ಯಾಕೋ ಮನಸ್ಸಿಗೆ ತುಂಬ ಸಮಾಧಾನ. ಅವರ ಪಾಂಡಿತ್ಯ, ಅನುಭವ, ಎಲ್ಲಕ್ಕಿಂತ ಹೆಚ್ಚಾಗಿ ಅವರ ಸರಳತೆ..ಬೆರಗುಗೊಳಿಸುವಂಥದ್ದು. ಬದುಕಿಗೆ ಒಂಥರದ ಧೈರ್ಯ ಬಂದಿದ್ದು, ಅದು ನನ್ನ ಮುಂದಿಡುತ್ತಿರುವ ನೂರೊಂದು ಸವಾಲುಗಳಿಗೆ ಸಮರ್ಥವಾಗಿ ಜವಾಬು ಹೇಳುವ ತಾಕತ್ತು ಸಿಕ್ಕಿದ್ದೇ ಅವರಿಂದ..

Waiting for one new epoch...!