October 9, 2015

'ಬರ'ವಣಿಗೆ


ಬೆಳಿಗ್ಗೆ ಏಳು ಗಂಟೆಗೆಲ್ಲಾ ಆಫೀಸ್, ಸಂಜೆ ಬರುವಷ್ಟರಲ್ಲಿ ಮತ್ತದೇ ಏಳು ಗಂಟೆ.  ವಾರಾಂತ್ಯದಲ್ಲಿ ಸಾಕು ಸಾಕು ಅನ್ನುವಷ್ಟು ಆಟ,ತಿರುಗಾಟ,ಕೆಲಸ,ಟಿವಿ! ಅದ್ಯಾವಾಗ SunDay ಹೋಗಿ SunNight ಆಗುತ್ತೋ ಗೊತ್ತೇ ಆಗುವುದಿಲ್ಲ. ಒಟ್ಟಿನಲ್ಲಿ ಬರವಣಿಗೆಗೆ ಬರಗಾಲ.  ಒಮ್ಮೊಮ್ಮೆ ಕಾಲಿಗೆ ಚಕ್ರ ಕಟ್ಟಿಕೊಂಡು ಕಾಲಚಕ್ರದ ಜೊತೆ ತಿರುಗಾಟ, ಇನ್ನೊಮ್ಮೆ ಕಾಲೇ ಇಲ್ಲವೇನೋ ಎಂಬಂತೆ ಕೂತು ಕಂಪ್ಯೂಟರ್ ಕುಟ್ಟುವ ಕೆಲಸ. ಮೆಂಟಲ್ ಜಾಮ್! ನನ್ನ 'Kindle' ಪುಸ್ತಕ ಮಳಿಗೆಯಲ್ಲಿ ಕಿಂಡಲ್ ಮಾಡುತ್ತಾ ಕುಳಿತಿರುವ ಕೇಜಿ ಕೇಜಿ ಪುಸ್ತಕಗಳು, ಮೊನ್ನೆ ಎಲ್ಲೋ ಇಂಟರ್ನೆಟ್ನಲ್ಲಿ ಇಣುಕಿ ನೋಡುತ್ತಿದ್ದಾಗ ನನಗೆ ತುಂಬಾ ಇಷ್ಟವಾಗುವ ಬಿ.ವಿ.ಅನಂತರಾಮ್ ಅವರ ಕಾದಂಬರಿಗಳು ಸಿಕ್ಕು ಅವುಗಳನ್ನ 'Kindle'ಗೆ ತುರುಕಿದ್ದಾಗಿದೆ. 'ಜಿಂಕೆ'ಯ ಜೊತೆ ಓಡುವ-ಓದುವ  ಮಜವೇ ಬೆರೆ.

ಜಗತ್ತೆಲ್ಲ ಸ್ಮಾರ್ಟ್ ಆಗುತ್ತಿದೆ. ಕಯ್ಯಲ್ಲಿ ಮೊಬೈಲ್ ಗ್ಯಾಜೆಟ್ ಹಿಡಿದುಕೊಂಡು ಮಕ್ಕಳೆಲ್ಲ ಇಮ್ಮೊಬೈಲ್ ಆಗುತ್ತಿದ್ದಾರೆ. ಈ ಶೈಕ್ಷಣಿಕ ವ್ಯವಸ್ಥೆ, ಸೋಶಿಯಲ್ ಮೀಡಿಯಾ ಅವರಿಗೆ ವಿದ್ಯೆ, ವಿನಯವೊಂದನ್ನು ಬಿಟ್ಟು ಬೇರೆ ಎಲ್ಲಾ ಕಲಿಸಿಕೊಡುತ್ತಿದೆ. ಹಳ್ಳಿಯ ಮಕ್ಕಳಾದರೂ ಪರವಾಗಿಲ್ಲ ಸ್ವಾಮೀ, ಈ ಪೇಟೆಯ ಮಕ್ಕಳೆಲ್ಲ ಯಾವ ಪ್ರೈಮ್ಮಿನಿಸ್ಟರ್ ಗೂ ಕಡಿಮೆಯಿಲ್ಲದಂತೆ ಬ್ಯುಸಿ ಇರುತ್ತಾರೆ. ಅದೇನೋ ರೇಸಿಗೆ ಬಿದ್ದವರ ಹಾಗೆ.

'ಕುಂಗ್ ಫು ಪಾಂಡ' ದಲ್ಲಿ 'ಇನ್ನರ್ ಪೀಸ್' ಅಂತ ತೋರಿಸ್ತಾರಲ್ಲ ಅದು ಬರೀ ಗೊಂಬೆ ಆಟವಲ್ಲ. ಮನೆಯಲ್ಲಿ ಎಲ್ಲರೂ ನಿಂತೋ ಕುಳಿತೋ ಸಂಜೆ ಒಂದಾದಮೇಲೊಂದರಂತೆ ಧಾರಾವಾಹಿಗಳನ್ನೂ ಇಲ್ಲ ಯಾವುದೋ ತಂಗಳು ಸಿನಿಮಾವನ್ನೂ ನೋಡುತ್ತಿರುವಾಗ ಥಟ್ಟನೆ ಕರೆಂಟು ಹೋಗುತ್ತಲ್ಲ, ಅದು ಅದ್ಭುತವಾದ ಸಮಯ. ಮನುಷ್ಯರು ಮಾತಾಡುವುದೇ ಆವಾಗ! ಸೀರಿಯಲ್ ಸಂತೆಗಳಲ್ಲಿ ಕಳೆದು ಹೋಗಿ ಮೈ ಮನಸ್ಸುಗಳನ್ನ ಕೆಡಿಸಿಕೊಳ್ಳುವುದಕ್ಕಿಂತ ಸಂಜೆಯನ್ನ ಕಳೆಯಲಿಕ್ಕೆ ಚಂದನೆಯ ಆರೋಗ್ಯಕರವಾದ ಹವ್ಯಾಸವನ್ನ ಬೆಳೆಸಿಕೊಳ್ಳಿ .  ಇತ್ತೀಚೆಗಿನ ದೃಶ್ಯಮಾಧ್ಯಮಗಳಾವವೂ ನಮಗೆ ಸಕಾರಾತ್ಮಕವಾದ ಯೋಚನೆಗಳನ್ನಾಗಲೀ ಅಥವಾ ಬದುಕಿನ ಮೌಲ್ಯಗಳನ್ನ ಉತ್ತೇಜಿಸುವ ಗೋಜಿಗೆ ಹೋಗುತ್ತಿಲ್ಲ. ಅಲ್ಲಿ ಬರೀ ಆಡಂಬರ ಹಾಗೂ ಅಶ್ಲೀಲತೆ.ಮೊನ್ನೆ ಮುತ್ಯಾಲ ಮಡುವು ಅಂತ ಯಾವುದೋ ಟ್ರಿಪ್ ಗೆ ಹೋಗಿ ಬಂದದ್ದಾಯಿತು. ಯುವಜನತೆ ಅದ್ಯಾವ ಪರಿಗೆ ಹದಗೆಟ್ಟು ಹೋಗಿದ್ದಾರೆ ಅನ್ನುವುದಕ್ಕೆ ಸಾಕ್ಷಿಯಂತಿತ್ತು ಅದು.  ಸಿಂಪ್ಲಿಸಿಟಿ ಹೋಗಿ ಕೊಂಪ್ಲಿಸಿಟಿ ಆಗುತ್ತಿದೆ, ಇನ್ನು ಸ್ಮಾರ್ಟ್ ಸಿಟಿ ಎಲ್ಲಿಂದ ಆಗಬೇಕು? ಅಲ್ಲಿ ಹಳ್ಳಿಗಳಲ್ಲಿ ರೈತರು ಸಾಯುತ್ತಿದ್ದರೆ ಇಲ್ಲಿ ನಗರಗಳನ್ನು ಉದ್ಧಾರ ಮಾಡುವ ಯೋಜನೆ ರೆಡಿ ಆಗುತ್ತಿದೆ.  ಅದ್ಹೇಗೆ 'ನಂದಿನಿ' ಅನ್ನುವ ಹಾಲಿನ ಒಕ್ಕೂಟ ಅಷ್ಟೊಂದು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ? ಅದ್ಯಾಕೆ ಅದೇ ರೀತಿಯಾದ ವ್ಯವಸ್ಥಿತವಾದ ಮಾರುಕಟ್ಟೆಯನ್ನ ಕೃಷಿ ಉತ್ಪನ್ನಗಳಿಗೆ ಒದಗಿಸಿಲ್ಲ? ರೈತ ದೇಶದ ಬೆನ್ನೆಲುಬು ಅಂದು ಅಂದು, ಆತನ ಸ್ಪೈನಲ್ ಕಾರ್ಡ್ ಅನ್ನೇ  ಕಿತ್ತುಹಾಕಲಾಗುತ್ತಿದೆ.

ಇದ್ದುದರಲಿ ಗೆಳೆಯ ಶ್ರೀಕೃಷ್ಣ ಮತ್ತವನ ತಂಡ ಒಂದು ಒಳ್ಳೆಯ ಆರಂಭ ಮಾಡಿದ್ದಾರೆ.  ConnectFarmer.com ಗೆ ಒಮ್ಮೆ ಭೇಟಿ ಕೊಡಿ. ಅವರ ಪ್ರಯತ್ನ ಯಶಸ್ವಿಯಾಗಲಿ.


ರಾಜಕಾರಣಿಗಳು ರಾಜಕೀಯ ಮಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನ ಕೊಡಬೆಕಿದೆ. ಕರ್ನಾಟಕವನ್ನ, ಭಾರತವನ್ನ ಗೆದ್ದಲು ಹುಳುಗಳಂತೆ ತಿಂದಿದ್ದು ಸಾಕು. ದೂರದೃಷ್ಟಿ ಇಲ್ಲದ ಯೋಜನೆಗಳು, ಸೂಕ್ಷ್ಮ ಸಂವೇದನೆ ಇರದ ನಾಯಕರುಗಳು, ಕೊಳತು ನಾರುತ್ತಿರುವ ಕಾನೂನುಗಳು ಎಲ್ಲ ಒಮ್ಮೆ ಕ್ಲೀನ್ ಆಗಬೆಕಿದೆ. ಭಾರತದಲ್ಲಿ ಸ್ವಾತಂತ್ರ್ಯ ಹೋಗಿ ಸ್ವೇಚ್ಚಾಚಾರ ಹೆಚ್ಚಾಗುತ್ತಿದೆ. 'A good start is half done' ಅಂತಾರಲ್ಲ, ನಮ್ಮ ಹಣೆಬರಕ್ಕೆ ಪ್ರಜಾಪ್ರಭುತ್ವದ ಆರಂಭವೇ ಸರಿಯಾಗಿರಲಿಲ್ಲ. ಕಡೆಯಪಕ್ಷ ಮೋದಿಯಾದರೂ ಮೋಡಿ ಮಾಡಬಲ್ಲರೇ ಅನ್ನುವ ಕುತೂಹಲಭರಿತ ಕಣ್ಣುಗಳೊಂದಿಗೆ ...
February 21, 2015

ತಲೆಹರಟೆ!ಎಲ್ಲರೂ ಇದ್ದು, ಯಾರೂ ಇಲ್ಲದಂತೆ ಬದುಕುವುದು ತುಂಬ ಕಷ್ಟ. ನಮ್ಮವರ ಜೊತೆ ಬದುಕುವ ಜೀವನ ತುಂಬ ಚೆಂದ. ಮನೆಯೆಲ್ಲ ಖಾಲಿ ಖಾಲಿ, ಮನಸ್ಸು ಮಾತ್ರ ಒಂದಿಂಚೂ ಜಾಗ ಸಿಗದಂತೆ ತುಂಬಿಕೊಂಡಿದೆ .
 ಬದುಕಿದ್ದೇನೆ, ಬದುಕನ್ನ ಬದುಕುವ, ಜೀವನವನ್ನ  ಜೀವಿಸುವ ಪ್ರಯತ್ನದಲ್ಲಿದ್ದೇನೆ. ಹಳೇ ಹುಡುಗಿಗೆ ಹಳೆಯ ಮೊಬೈಲಿನಿಂದ ಕಳಿಸಿದ ಎಸ್ಸಮ್ಮೆಸ್ಸುಗಳು , ಸಂವಾದಗಳು ನೆನಪಾಗಿ, ಹಳೆಯ ಗೆಳತಿಗಾಗಿ ಹುಟ್ಟಿದ್ದ ಕವಿ-ಕವನಗಳು ಉಸಿರಾಡಿ, ಆ ಬಾಲ್ಯದ ಕ್ಷಣಗಳ್ಯಾವವೂ ಮತ್ತೆ ಸಿಗಲಾರದೇ ಅನ್ನುವ ಸತ್ಯ ಅರಿವಾಗಿ... ಅಬ್ಬ! ನಿನ್ನೆಗಳನ್ನೆಲ್ಲ ತಿರುವಿ ಹಾಕಿದರದೆಷ್ಟು ನೆನಪುಗಳು.... 

 
ಈ ಬೆಂ"ಧೂಳು"ರಿನಲ್ಲಿ  ಬದುಕು ಕಟ್ಟಿಕೊಳ್ಳುವವರು ಪುಣ್ಯವಂತರಂತೂ  ಅಲ್ಲ!ಯಾಕೆ ಅಂತೀರ? ಉತ್ತರ ನಿಮ್ಮಲ್ಲೇ ಸಿಗಬಹುದು, ಹುಡುಕಿಕೊಳ್ಳಿ . ಮೊದಲು ವಿದ್ಯಾಭ್ಯಾಸದ ಹೊಣೆ-ಹೊರೆ, ನಂತರ ಕೆಲಸ, ಪ್ರಮೋಷನ್ನು, ಸ್ವಂತ ಮನೆ-ಕಾರು, ಸ್ವಂತ  ವ್ಯಫು  !.....  ಒಟ್ಟಿನಲ್ಲಿ ಮುಗಿಯದ ಲೈಫು, ಬಿಟ್ಟೆನೆಂದರೂ ಬಿಡದೀ ಬೆಂಗಳೂರು ಮಾಯೆ!  ಸಿಗುವ ಮೂರು ದಿನದ ಬಾಳಿನಲ್ಲಿ ಅದೇನೆಲ್ಲ ಮಾಡಿ-ಇಟ್ಟು  ಹೋಗುತ್ತೆವಲ್ಲ? ನಮ್ಮ ಮುಂದಿನ ತಲೆಮಾರಿಗೆ ಕಟ್ಟಿಕೊಡುತ್ತಿರುವುದು ಬರೀ ಭೋಗದ ಬದುಕನ್ನಲ್ಲದೇ ಮತ್ತೇನೂ ಅಲ್ಲ. ಮನೆಯ ಗೋಡೆಗೆ ಅಂಟಿಸಿದ ಟೆಲಿವಿಷನ್ ಅನ್ನುವುದ ನಮ್ಮ "ವಿಷನ್ " ಕಿತ್ತುಕೊಳ್ಳುತ್ತಿದೆ , ಮೊಬೈಲ್-ಟ್ಯಾಬ್ ಗಳು ಮಕ್ಕಳನ್ನ, ಅವರ ಬಾಲ್ಯವನ್ನ ಹಾಳುಗೆಡವುತ್ತಿವೆ. 

ಸಂಸ್ಕಾರವಿಲ್ಲದ ಶಿಕ್ಷಣ, ಶಿಷ್ಟಾಚಾರವಿಲ್ಲದ ಬದುಕು ಮನುಷ್ಯನನ್ನ ಸ್ವಾರ್ಥಿ ಹಾಗೂ ಅಹಂಕಾರಿಯನ್ನಾಗಿಸುತ್ತಿದೆ. ಭಾಷೆ ಒಂದು ಸಂಸ್ಕೃತಿಯನ್ನ ಬಿಂಬಿಸುವ, ಅದನ್ನ ಕಾಪಾಡಿಕೊಳ್ಳುವ, ಸಂಬಂಧಗಳನ್ನ ಗಟ್ಟಿಗೊಳಿಸುವ ಸಂವೇದನೆಯಾಗದೆ ಅಳಿಸುತ್ತಿದೆ. ಎಲ್ಲ ಬಿಟ್ಟು, ನಾವು ಮುಖ ಮಾಡಿ ನಿಂತಿರುವುದು ಒಂದು ಸೆಕ್ಯುಲರ್ ಸಮಾಜದ ಕಡೆ. ಅದು ನಮ್ಮನ್ನ ಎಲ್ಲಿಯವರೆಗೆ ಎಳೆದೊಯ್ಯುತ್ತೊ ಗೊತ್ತಿಲ್ಲ. ಎಲ್ಲವನ್ನೂ ಬರೀ ಒಂದು ವ್ಯಾಪಾರದ ದೃಷ್ಟಿಯಿಂದ ನೋಡಲಾಗುತ್ತಿದೆ, ಸಂಬಂಧಗಳನ್ನೂ ಕೂಡ! 

  ಬಹುಶಃ ಟೆಕ್ನಾಲಜಿಯನ್ನ (ತಂತ್ರಜ್ಞಾನ) ಅದರ ಬಾಲ್ಯಾವಸ್ಥೆಯಿಂದ ಕಣ್ತುಂಬಿಕೊಂಡವರು ನನ್ನ-ನಿಮ್ಮ  ಪೀಳಿಗೆಯವರಷ್ಟೇ ಇರಬಹುದು, ಈಗಿನ ತಲೆಮಾರಿಗೆ ಆ ಅವಕಾಶ-ಅನುಭವವಿಲ್ಲ! ಈಗೇನಿದ್ದರೂ ಬೆರಳ ತುದಿಯಲ್ಲೇ ಬ್ರಹ್ಮಾಂಡ. ಕೃಷ್ಣ! ಕೃಷ್ಣ !