ಮಾತಿನಲ್ಲಿ ಮನೆ ಕಟ್ಟಬಹುದಂತೆ, ಮಾತು ಮನಸ್ಸನ್ನ ಕೆಡಿಸಬಹುದಂತೆ. ಮೌನವೇ ಮಾತಾದಾಗ ಇದ್ಯಾವುದರ ತಲೆಬಿಸಿ ಇಲ್ಲ ನೋಡಿ. ಮಾತಿಗೆಲ್ಲಿಂದ ತೂಕ? ಆದರೆ ಹಗುರವಾಗಿ ಮಾತಾಡುವನನ್ನ ಈ ಜಗತ್ತು ಯಾವತ್ತೂ ತೂಗುವುದಿಲ್ಲ. ತೂಕದ ಮಾತಾಡಿ, ಸೂತಕದ ಮಾತಲ್ಲ!
ಎಲ್ಲರಿಗೂ ಗೌರವ ಕೊಟ್ಟು ಮಾತಾಡುವುದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ ಹೊರತು ಮತ್ತೇನೂ ಅಲ್ಲ.
ನಾವು ಏನು ನೋಡುತ್ತೇವೋ, ಏನು ಓದುತ್ತೀವೋ, ನಮ್ಮ ಅನುಭವಗಳಿಂದ, ಈ ಪ್ರಕ್ತೃತಿಯಿಂದ ಏನೂ ಕಲಿಯದೆ ಹೋದರೆ ಈ ಹುಟ್ಟಿಗೊಂದು ಅರ್ಥ ಎಲ್ಲಿ? ದೇಹಕ್ಕೆ ವಯಸ್ಸಾಗುತ್ತದೆ ಹೊರತೂ ಬುದ್ಧಿಗೆ ಎಲ್ಲಿಂದ ಆಹಾರ? ಬರೀ ಸುಳ್ಳುಗಳಲ್ಲೇ ಜೀವಿಸುತ್ತೆವೆಯೇ ಹೊರತು ಸತ್ಯದಲ್ಲಲ್ಲ ಹಾಗೂ ಸತ್ಯವಿಲ್ಲದ ಬಾಳು ಅದು ಸತ್ತಂತೆ.
ಜೀವನದಲ್ಲಿ ನಾವು ಸಣ್ಣ ಪುಟ್ಟ ವಿಚಾರಗಳನ್ನೇ ಗಂಭೀರವಾಗಿ ಪರಿಗಣಿಸಿ, ಬೇಕಾದವನ್ನೆಲ್ಲ ಕಡೆಗಣಿಸಿ, ಗುಣಿಸಿ, ಕೂಡಿ ಕಳೆದು ಅಳಿಸಿ, ಆಕಳಿಸುವುದೇ ಹೆಚ್ಚು. ಗಳಿಸಿದ್ದೇನು, ಉಳಿಸಿದ್ದು ಯಾರಿಗೆ? ಆಳಿ ಅಳಿದ ಮೇಲೆ ಉಳಿದದ್ದೇನು? ತಾವೂ ಸುಖ ಪಡದೇ, ಇತರರಿಗೂ ಬಿಡದೇ, ಸದಾ ಕೊರಗಿ, ಕರಗಿ, ಬೆರೆಯದೇ ಹೋದರೇನು ಬಂತು. ಬದುಕನ್ನ ಪ್ರೀತಿಸದೇ, ಅದನ್ನ ಸ್ವೀಕರಿಸದೆ ನಡೆದರೆ ದುಃಖ ತಪ್ಪಿದ್ದಲ್ಲ. ತಪ್ಪು ನಮದೆಲ್ಲ. ಬಹುಶಃ ಯಾವ ಜೀವಿಯೂ ನಾನು ಹೀಗೇ ಇರಬೇಕೆಂದು ಹಾತೊರೆದು ಬದುಕುವುದಿಲ್ಲ,ಅವು ಪ್ರಕೃತಿಯನ್ನು ಗೌರವಿಸುತ್ತ ನಡೆಯುತ್ತವೆ. ನಾವು ಮಾತ್ರ ಅಹಂಕಾರಿಗಳು, ಅತೀ ಮಾನುಷರು! ಬದುಕಿ ಬದುಕಲು ಬಿಡಿ.
ಪ್ರಸಿದ್ಧ ನಟರೊಬ್ಬರು ಹಲವು ವರ್ಷಗಳ ಹಿಂದೆ ಹೇಳಿದ ಮಾತು "The world has become a giant megamall and the only thing they're selling is dissatisfaction. Make sure your neighbor doesn't get more."
ನಾವೆಲ್ಲ ಕರಗುವವರು, ಕೊರಗಿದಷ್ಟು ಬೇಗ. ಅದೆಷ್ಟುದಿನದ ಯೋಗ? ಅದಕ್ಕೇ, ದೇಶ ಕಟ್ಟಿ, ಮನೆಯನ್ನಲ್ಲ!